ಉದ್ಯೋಗಕ್ಕಿಂತ ಉದ್ಯಮಿಗಳಾಗಿ: ಡಿಸಿಎಂ

| Published : Feb 22 2024, 01:52 AM IST

ಸಾರಾಂಶ

ಕನಕಪುರ: ಉದ್ಯೋಗ ಪಡೆಯುವುದಷ್ಟೇ ನಿಮ್ಮ ಗುರಿಯಾಗಬಾರದು, ಉದ್ಯಮಿಗಳಾಗಿ ಹತ್ತಾರು ಉದ್ಯೋಗ ಸೃಷ್ಟಿಸುವತ್ತ ಆಲೋಚಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಯುವಕರಿಗೆ ಕರೆ ನೀಡಿದರು.

ಕನಕಪುರ: ಉದ್ಯೋಗ ಪಡೆಯುವುದಷ್ಟೇ ನಿಮ್ಮ ಗುರಿಯಾಗಬಾರದು, ಉದ್ಯಮಿಗಳಾಗಿ ಹತ್ತಾರು ಉದ್ಯೋಗ ಸೃಷ್ಟಿಸುವತ್ತ ಆಲೋಚಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಯುವಕರಿಗೆ ಕರೆ ನೀಡಿದರು.

ನಗರದ ಆರ್‌ಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನೀವೆಲ್ಲರೂ ಉದ್ಯೋಗ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೀರಿ. ಸದ್ಯಕ್ಕೆ ನೀವು ಉದ್ಯೋಗ ಪಡೆದುಕೊಳ್ಳಿ, ಉದ್ಯೋಗ ಪಡೆದು ಕೊಂಡು ಕೆಲ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯಮಿಗಳಾಗುವತ್ತ ಗಮನಹರಿಸಬೇಕು, ಜೀವನದಲ್ಲಿ ಯಶಸ್ಸು ಸಾಧಿಸಲು ಕನಸು ಕಾಣಬೇಕು, ಅದಕ್ಕಾಗಿ ಶಿಸ್ತು, ಬದ್ಧತೆ ಅಳವಡಿಸಿಕೊಳ್ಳಬೇಕು, ಇಂದು ಬೆಂಗಳೂರು ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ್ದು ಹೊರಗಿನಿಂದ ಬಂದ ಜನ ಇಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ, ಹೀಗಾಗಿ ನೀವು ಕೇವಲ ಕನಕಪುರಕ್ಕೆ ಸೀಮಿತಗೊಳ್ಳುವ ಆಲೋಚನೆ ಇಟ್ಟುಕೊಳ್ಳದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ತಯಾರಾಗುವಂತೆ ತಿಳಿಸಿದರು.

ನೀವೆಲ್ಲರೂ ಬೆಂಗಳೂರಿನವರು. ಆಡಳಿತ ದೃಷ್ಟಿಯಿಂದ ಮಾತ್ರ ಈ ಭಾಗವನ್ನು ಬೇರೆ ಜಿಲ್ಲೆಯಾಗಿ ಮಾಡಲಾಗಿದೆ ಅಷ್ಟೇ. ಈ ಭಾಗದ ಜನ ಯಾವತ್ತಿದ್ದರೂ ಬೆಂಗಳೂರಿನವರು ಎಂಬುದನ್ನು ಮರೆಯಬಾರದು, ಆರ್ ಇಎಸ್ ಸಂಸ್ಥೆಗೆ ಹೊಸ ರೂಪ ನೀಡಲು ಪ್ರಯತ್ನಿಸುತ್ತಿದ್ದು ಈ ಭಾಗದಲ್ಲಿ ಕೃಷಿ ವಿವಿ ತರಲು ಪ್ರಯತ್ನಿಸಲಾಗುತ್ತಿದೆ. ಮೊದಲು ಕನಕಪುರ, ರಾಮನಗರದಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದರು. ಆದರೆ ಈಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬೆಳೆಯುತ್ತಿದ್ದಾರೆ. ಇಲ್ಲಿನ ಕೃಷಿ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತಾಗುತ್ತಿದೆ, ಹೀಗಾಗಿ ಈ ಭಾಗದಲ್ಲಿ ಕೃಷಿ ವಿವಿ ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

ನಮ್ಮ ಜಿಲ್ಲೆಯ ಪ್ರತಿ ಎರಡು ಮೂರು ಪಂಚಾಯತಿ ಮಟ್ಟದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡಲು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಮುಂದಾಗಿದ್ದೇವೆ. ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಟೊಯೋಟಾ ಸಂಸ್ಥೆ ನಾಲ್ಕು ಶಾಲೆ ನಿರ್ಮಿಸಲು ಮುಂದೆ ಬಂದಿದೆ. ಈ ಶಾಲೆಗಳನ್ನು ಖಾಸಗಿ ಶಾಲೆಗಳು ಜವಾಬ್ದಾರಿ ಪಡೆದುಕೊಂಡು ಶಿಕ್ಷಣ ನೀಡಬೇಕು, ನಾವೆಲ್ಲರೂ ಈ ಸಂಸ್ಥೆಯ ಸಂಸ್ಥಾಪಕರಾದ ಪೂಜ್ಯ ಶ್ರೀ ಕರಿಯಪ್ಪನವರನ್ನು ಸದಾ ಸ್ಮರಿಸಬೇಕು. ಕರಿಯಪ್ಪನವರು ಶಾಸಕರಾಗಿದ್ದಾಗ ಶಾಲೆಯಲ್ಲಿ ಸೀಟು ಪಡೆಯಲು ಅವರ ಬಳಿ ಹೋಗಿದ್ದೆ, ಮುಖ್ಯಮಂತ್ರಿ ಬಳಿ ಹೋದರೂ ನನಗೆ ಆ ಶಾಲೆಯಲ್ಲಿ ಸೀಟು ಕೊಡಲಿಲ್ಲ ಎಂದು ತಮ್ಮ ಹಳೆಯ ನೆನಪನ್ನು ಮೆಲಕು ಹಾಕಿದರು. ಇತ್ತೀಚೆಗೆ ರಾಮನಗರದಲ್ಲಿ 100 ಹೊಸ ಸರ್ಕಾರಿ ಬಸ್‌ ಗಳನ್ನು ಲೋಕಾರ್ಪಣೆ ಮಾಡಲಾಗಿದ್ದು ಕನಕಪುರ ಬೆಂಗಳೂರು ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಕನಕಪುರ ಸಮೀಪಕ್ಕೆ ಮೆಟ್ರೋ ರೈಲು ತರುವ ಪ್ರಯತ್ನ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಇದೇ ವೇಳೆ ಆರ್. ಇ. ಎಸ್. ಸಂಸ್ಥೆಯ ವತಿಯಿಂದ ಕಾಲೇಜು ಮುಂಬಾಗ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಸಂಕೀರ್ಣಕ್ಕೆ ಭೂಮಿಪೂಜೆ ನೆರವೇರಿಸಿದರು. ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್. ಆರ್.ಇ.ಎಸ್ ಅಧ್ಯಕ್ಷ ಹೆಚ್.ಕೆ.ಶ್ರೀಕಂಠು, ಉದ್ಯಮಿ ಲಕ್ಷ್ಮಣ್ ಸೇರಿದಂತೆ ಸಂಸ್ಥೆಯ ನಿರ್ದೇಶಕರು, ಶಿಕ್ಷಕರು ಹಾಗೂ ಉದ್ಯೋಗಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು. (ಈ ಕೋಟನ್ನು ಪ್ಯಾನಲ್‌ನಲ್ಲಿ ಬಳಸಿ)ರಾಮನಗರ ಜಿಲ್ಲೆಗೆ ವೈದ್ಯಕೀಯ ಕಾಲೇಜು ತರಲು ಪ್ರಯತ್ನಿಸಿದೆ ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿದ್ದು ಬಹಳ ನೋವುಂಟು ಮಾಡಿತು. ಈಗ ದಯಾನಂದ ಸಾಗರ ಸಂಸ್ಥೆ ಜತೆ ಮಾತಾಡಿ ಖಾಸಗಿ ಕಾಲೇಜು ತರಲಾಗಿದೆ. ಕನಕಪುರ ಹಾಗೂ ರಾಮನಗರದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಶೀಘ್ರದಲ್ಲೇ ಆರಂಭಿಸಲಾಗುವುದು.-ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಕೆ ಕೆ ಪಿ ಸುದ್ದಿ 03:

ಕನಕಪುರದ ಆರ್‌ಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.