ಭೂಮಿ ಇರುವ ತನಕ ಅರಸು ಕೊಡುಗೆ ಶಾಶ್ವತ: ಎಚ್.ಬಿ. ವಿಜಯಕುಮಾರ್

| Published : Aug 22 2025, 01:00 AM IST

ಭೂಮಿ ಇರುವ ತನಕ ಅರಸು ಕೊಡುಗೆ ಶಾಶ್ವತ: ಎಚ್.ಬಿ. ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅರಸು ಜನ್ಮಜಯಂತಿ ಕಾರ್ಯಕ್ರಮದ ಕುರಿತು ಗ್ರಾಪಂಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಊರಿನಲ್ಲಿ ಕಾರುಗಳು ಬಂದು ನಿಂತಾಗಲಷ್ಟೇ ಇಂದು ಅರಸು ಕಾರ್ಯಕ್ರಮ ಎನ್ನುವ ಅರಿವು ನಮಗೆ ಉಂಟಾಗುತ್ತಿದೆ. ತಾಲೂಕು ಆಡಳಿತ ಒಂದು ದಿನದ ಕಾರ್ಯಕ್ರಮಕ್ಕೆ ಅರಸು ಜಯಂತಿ ಸೀಮಿತಗೊಳಿಸಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಹುಣಸೂರು

ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 110ನೇ ಜಯಂತಿ ಅಂಗವಾಗಿ ತಾಲೂಕಿನ ಅರಸು ಹುಟ್ಟೂರು ಕಲ್ಲಹಳ್ಳಿಯಲ್ಲಿ ಮತ್ತು ಪಟ್ಟಣದ ಅರಸು ಪುತ್ಥಳಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರಸು ಸ್ಮರಣೆ, ಪ್ರತಿಭಾ ಪುರಸ್ಕಾರ ಮತ್ತು ಅರಸು ಒಡನಾಡಿಗಳಿಗೆ ಸನ್ಮಾನ ನಡೆಸಲಾಯಿತು.ಕಲ್ಲಹಳ್ಳಿಯಲ್ಲಿ ಅರಸು ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್ ಮಾತನಾಡಿ, ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದ ಭೂಸುಧಾರಣಾ ಕಾಯ್ದೆಯನ್ನು ಚಾಣಾಕ್ಷತನದಿಂದ ಜಾರಿಗೊಳಿಸುವ ಇತಿಹಾಸ ನಿರ್ಮಿಸಿದರು. ಈ ಭೂಮಿ ಇರುವವರೆಗೂ ಅರಸುರನ್ನು, ಅವರ ಆಡಳಿತ ಮತ್ತು ಕಾರ್ಯಕ್ರಮಗಳು ಶಾಶ್ವತವಾಗಿ ಇರಲಿವೆ ಎಂದರು.

ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ನೇರ ನಡೆ, ನುಡಿಯಂತಹ ವ್ಯಕ್ತಿತ್ವದೊಂದಿಗೆ ಅರಸು ರಾಜ್ಯದ ಬಡ, ಶೋಷಿತರ ಬಾಳಿಗೆ ಬೆಳಕಾದರು. ಚುನಾವಣಾ ರಾಜಕಾರಣದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದರು ಎಂದು ಸ್ಮರಿಸಿದರು.

ಕಲ್ಲಹಳ್ಳಿ ಗ್ರಾಪಂ ಅದ್ಯಕ್ಷ ರಾಜಶೇಖರ್ ಮಾತನಾಡಿ, ಅರಸು ಜನ್ಮಜಯಂತಿ ಕಾರ್ಯಕ್ರಮದ ಕುರಿತು ಗ್ರಾಪಂಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಊರಿನಲ್ಲಿ ಕಾರುಗಳು ಬಂದು ನಿಂತಾಗಲಷ್ಟೇ ಇಂದು ಅರಸು ಕಾರ್ಯಕ್ರಮ ಎನ್ನುವ ಅರಿವು ನಮಗೆ ಉಂಟಾಗುತ್ತಿದೆ. ತಾಲೂಕು ಆಡಳಿತ ಒಂದು ದಿನದ ಕಾರ್ಯಕ್ರಮಕ್ಕೆ ಅರಸು ಜಯಂತಿ ಸೀಮಿತಗೊಳಿಸಿರುವುದು ಸರಿಯಲ್ಲ. ಮುಂದಿನ ವರ್ಷದಿಂದ ಪೂರ್ವಭಾವಿ ಸಭೆ ನಡೆಸಿ ನಮ್ಮೆಲ್ಲರ ಅಭಿಪ್ರಾಯ ಪಡೆದು ಕಾರ್ಯಕ್ರಮ ನಡಸಬೇಕೆಂದು ಒತ್ತಾಯಿಸಿದರು.

ಅರಸು ಪುತ್ಥಳಿ ಆವರಣದಲ್ಲಿ:

ಪಟ್ಟಣದ ಅರಸು ಪುತ್ಥಳಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅರಸು ಒಡನಾಡಿಗಳಾದ ಎಚ್.ಎಸ್. ಶಿವಯ್ಯ, ಕಣಗಾಲು ರಾಮೇಗೌಡ ಅವರನ್ನು ಗಣ್ಯರು ಸನ್ಮಾನಿಸಿದರು.

ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಕುಮಾರ್ ಮಾತನಾಡಿ, ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳಿಗ ರಾಜಕೀಯ ಅಧಿಕಾರ ನೀಡುವ ಮೂಲಕ ದೇವರಾಜ ಅರಸು ಸಮಾಜದಲ್ಲಿ ಸಮಾನತೆಯ ಕನಸು ಕಂಡರು. ಸಾಮಾಜಿಕ ನ್ಯಾಯ ಅವರ ರಾಜಕೀಯ ಮಂತ್ರವಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್‌ರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಆಡಳಿತ ನಡಸಿದರು ಎಂದು ಸ್ಮರಿಸಿದರು.

ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಎಂದು ನಾಮಕರಣ ಮಾಡಿದ ಅರಸು ತಮ್ಮ 8 ವರ್ಷಗಳ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಆದರೆ ಇಂದು ಜಾತೀಯತೆ ಮತ್ತಷ್ಟು ವಿಜೃಂಭಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಿತು. ಎಸಿ ಎಚ್.ಬಿ. ವಿಜಯಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್, ಮುಖಂಡರಾದ ಹೊನ್ನಪ್ಪ, ಚಿಕ್ಕಣ್ಣ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವ್, ಎ.ಪಿ. ಸ್ವಾಮಿ ಇದ್ದರು.