ಸಾರಾಂಶ
ಹಾವೇರಿ: ಜನರ ಆಶೀರ್ವಾದ ಇರುವ ವರೆಗೂ ನನ್ನ ಏನೂ ಮಾಡೋಕೆ ಆಗೋಲ್ಲ. ಗ್ಯಾರಂಟಿ ಮೂಲಕ ಬಡವರಿಗೆ ಆರ್ಥಿಕ ಶಕ್ತಿ ತುಂಬಿರುವುದಕ್ಕೆ ವಿರೋಧಿಗಳಿಗೆ ಹೊಟ್ಟೆ ಉರಿ. ದ್ವೇಷ ಮಾಡಿದರು, ಹೊಟ್ಟೆಕಿಚ್ಚು ಪಡುವವರು ನಾಶವಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಮಾಲತೇಶ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣಗೊಳಿಸಿ, ಕನಕ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಲತೇಶ ದೇವರಿಗೆ ಪೂಜೆ ಮಾಡಿ ರಾಜ್ಯಕ್ಕೆ, ನನಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ.ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕುವ ಮೂಲಕ ನುಡಿದಂತೆ ನಡೆದಿದ್ದೇನೆ. ಎರಡನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ ಎಂದರು. ನಾನು ಅಸೂಯೆ ಪಡುವವರಿಂದ, ದ್ವೇಷದ ರಾಜಕಾರಣ ಮಾಡುವವರಿಂದ ಅಧಿಕಾರಕ್ಕೆ ಬರಲಿಲ್ಲ. ಜನರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ ಆಗಿರೋದಕ್ಕೆ ವಿರೋಧಿಗಳಿಗೆ ಹೊಟ್ಟೆ ಉರಿ. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ, ಜೆಡಿಎಸ್‌ಗೆ ಎಚ್ಚರಿಕೆ ನೀಡಿದರು.ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಅತ್ಯಂತ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇದೇ ಬಿಜೆಪಿ-ಜೆಡಿಎಸ್ ನವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಸಿದರು.
ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು ಎಂದರು.ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ ಎಂದರು.
ತಿಂಥಣಿ ಕನಕ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ನರಸೀಪುರ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಕಾರ್ಣಿಕದ ನಾಗಪ್ಪಜ್ಜ ಉರ್ಮಿ, ದೇವರಗುಡ್ದದ ಕರಿಯಪ್ಪಜ್ಜ ಹಕಾರಿ ಅವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಬಸವರಾಜ ಶಿವಣ್ಣನವರ ವಹಿಸಿದ್ದರು.ಸಚಿವರಾದ ಎಚ್.ಕೆ. ಪಾಟೀಲ್, ಶಿವಾನಂದ ಪಾಟೀಲ್, ಉಪಸಭಾಧ್ಯಕ್ಷ ರುದ್ರಪ್ಪ ಮಾ. ಲಮಾಣಿ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ್ ಮಾನೆ , ಮಾಜಿ ಸಚಿವ ಆರ್. ಶಂಕರ್, ನೆಹರೂ ಓಲೇಕಾರ್, ಗುಡ್ಡಗುಡ್ಡಾಪುರ ಗ್ರಾ.ಪಂ. ಅಧ್ಯಕ್ಷರಾದ ದ್ಯಾಮವ್ವ ಮೈ ಸತಗಿ ಸೇರಿ ಹಲವು ಗಣ್ಯರು ಇದ್ದರು.
ಮಾಲತೇಶ ಸನ್ನಿಧಿಯಲ್ಲಿ ಸಿಎಂ ಮಾಡಿದ ಘೋಷಣೆಗಳು: ಮಾಲತೇಶ ದೇವರ ಸನ್ನಿಧಿ ದೇವರಗುಡ್ಡವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸಲಾಗುವುದು.ದೇವರಗುಡ್ಡಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗುವುದು.