ಸಾರಾಂಶ
ಧಾರವಾಡ:ಜಗತ್ತಿನಲ್ಲಿ ಸೂರ್ಯ-ಚಂದ್ರರು ಇರುವ ವರೆಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡುವುದಿಲ್ಲ. ಸುಖಾಸುಮ್ಮನೆ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಬಿಜೆಪಿ ಮೇಲೆ ಹರಿಹಾಯುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.ಇಲ್ಲಿಯ ಮೃತ್ಯುಂಜಯ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರಹ್ಲಾದ ಜೋಶಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರಕ್ಕೆ ಡಾ. ಅಂಬೇಡ್ಕರ್ ಹಾಗೂ ಅವರ ರಚಿಸಿದ ಸಂವಿಧಾನದ ಮೇಲೆ ಸಾಕಷ್ಟು ಗೌರವ ಇದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಇದು ಬರೀ ರಾಜ್ಯದ, ಧಾರವಾಡದ ಚುನಾವಣೆ ಅಲ್ಲ. ದೇಶದ ನೇತಾರರನ್ನು ಸೃಷ್ಟಿಸುವ ಚುನಾವಣೆ. ದೇಶದ ಪ್ರಗತಿ, ವಿಕಾಸದ ಚುನಾವಣೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶದ ಜನರನ್ನು ಕಾಂಗ್ರೆಸ್ ಕಷ್ಟದ ಜೀವಕ್ಕೆ ದೂಡಿದ್ದಾರೆ. ಬರೀ ಭರವಸೆ, ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ನಡೆಸುವ ಕಾಂಗ್ರೆಸ್‌ನ ಸುಳ್ಳಿನ ರಾಜಕಾರಣ ಬಹಳ ನಡೆಯುವುದಿಲ್ಲ. ರಾಕ್ಷಸರಿಗೆ ರಾಮಚಂದ್ರ ಮಾಡಿದ ರೀತಿಯಲ್ಲಿಯೇ ಕಾಂಗ್ರೆಸ್ಸಿಗೂ ಮಾಡಬೇಕು ಎಂದರು.ಈಗ ಏನಿದ್ದರೂ ಮೋದಿ ಅವರ ಗ್ಯಾರಂಟಿ. ದೇಶದ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆ ಏತ್ತಿರುವ ಮೋದಿ ದಿನದ 24 ಗಂಟೆ ಕೆಲಸ ಮಾಡುತ್ತಾರೆ. ಒಂದು ಕಡೆ ಮೋದಿ, ಮತ್ತೊಂದು ಕಡೆ ಯುವರಾಜಾ ಇದ್ದಾರೆ. ಜಗತ್ತಿನ ಮೋದಿ ಭಾರತದ ಗೌರವ ಹೆಚ್ಚಿಸಿದರೆ ರಾಹುಲ್ ಗಾಂಧಿ ದೇಶದ ಹೆಸರು ಕಡಿಸಲು ವಿದೇಶಕ್ಕೆ ಹೋಗುತ್ತಾರೆ ಎಂದು ಕಿಡಿಕಾರಿದರು.ಪ್ರಧಾನಿ ಮೋದಿ ಅವರನ್ನು 3ನೇ ಬಾರಿ ಪ್ರಧಾನಿಯಾಗಿ, ಧಾರವಾಡ ಕ್ಷೇತ್ರದಲ್ಲಿ 5ನೇ ಬಾರಿಗೆ ಜೋಶಿ ಅವರನ್ನು ಆಯ್ಕೆ ಮಾಡಲು ಸನ್ನದ್ಧರಾಗಿ. ಇವರಿಬ್ಬರ ಕಣಕಣದಲ್ಲಿ ದೇಶಭಕ್ತಿ ಇದೆ. ಯುಪಿಎ ಸರ್ಕಾರದ ವೇಳೆ ಎಷ್ಟು ಭ್ರಷ್ಟಾಚಾರ ನಡೆದವು. ಆದರೆ, ಈಗ ಜೋಶಿ ಅವರು ಕಲ್ಲಿದ್ದಲು ಇಲಾಖೆಯನ್ನು ಸ್ವಚ್ಛ ಮಾಡಿ ತೋರಿಸಿದ್ದಾರೆ. ದೇಶಕ್ಕೆ ಕಲ್ಲಿದ್ದಲಿನಿಂದ ಹೆಚ್ಚು ಲಾಭವಾಗಿದೆ. ಇದೇ ಬಲದಿಂದ ಜೋಶಿ ಮತ್ತೊಮ್ಮೆ ಗೆಲ್ಲುತ್ತಾರೆಂಬ ನಂಬಿಕೆ ಇದೆ ಎಂದರು.ಮಹಾರಾಷ್ಟ್ರದಲ್ಲಿ ನಾವು ಸಂಘರ್ಷ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಅಲ್ಲಿ ಸರ್ಕಾರ ಬಿಜೆಪಿ ಜತೆ ಆಗಬೇಕಿತ್ತು. ಆದರೆ, ಉದ್ಭವ್ ಠಾಕ್ರೆ ಬೇರೆ ಮಾಡಿದರು. ಅದಕ್ಕೆ ಏಕನಾಥ್ ಸರ್ಕಾರ ಪಲ್ಟಿ ಮಾಡಿದರು. ಮಹಾರಾಷ್ಟ್ರದಲ್ಲಿ ಮಾಡಿದಂತೆ ನೀವು ಡ್ಯಾಶಿಂಗ್ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ, ಪಿ.ಎಚ್. ನೀರಲಕೇರಿ ಹಾಗೂ ಮರಾಠಾ ಮುಖಂಡರು ಇದ್ದರು.ಮರಾಠಿಯಲ್ಲಿ ಭಾಷಣ ಶುರುಭಾಷಣದ ಶುರುವಾತಿಗೆ ಜೈಭವಾನಿ, ರಾಮಚಂದ್ರಕಿ ಜೈ ಎಂದು ಘೋಷಣೆ ಕೂಗಿದ ಏಕನಾಥ ಶಿಂಧೆ, ಮರಾಠಿ ಭಾಷಿಕರ ಜಯ ಘೋಷಗಳ ಹಿನ್ನೆಲೆಯಲ್ಲಿ ಮರಾಠಿಯಲ್ಲಿ ಭಾಷಣ ಶುರು ಮಾಡಿದರು. ಮತ್ತೆ ಹಿಂದಿಯಲ್ಲೂ ಮಾತನಾಡಿದರು. ಧಾರವಾಡ ಹಾಗೂ ಪುಣೆ ಎರಡೂ ನಗರಗಳು ವಿದ್ಯಾಕಾಶಿ ಹಾಗೂ ಸಾಂಸ್ಕೃತಿಕ ಸ್ಥಳವಾಗಿವೆ ಎಂದರು.