ಆಧುನಿಕತೆ ಬೆಳದಂತೆ ಕ್ರಿಯಾಶೀಲ ಬದುಕು ದೂರ: ಡಿ.ಮಂಜುನಾಥ್

| Published : Sep 01 2024, 01:46 AM IST

ಆಧುನಿಕತೆ ಬೆಳದಂತೆ ಕ್ರಿಯಾಶೀಲ ಬದುಕು ದೂರ: ಡಿ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಶನಿವಾರ ಶ್ರಾವಣ ಸಂಭ್ರಮ-ಗಾಯನ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಮ್ಮ ಮನಸ್ಸು ಸದಾ ಕಾಲ ಶ್ರದ್ಧೆಯಿಂದ ಕ್ರಿಯಾಶೀಲವಾಗಿರಲು ಶ್ರಾವಣ ಮಾಸ ಆಚರಣೆ ಸಹಕಾರಿಯಾಗಿದ್ದು, ದಾರಿ ತಪ್ಪುತ್ತಿರುವ ಹಿಂದಿನ ಯುವ ಪೀಳಿಗೆಗೆ ಇಂತಹ ಆಚರಣೆಗಳ ಮಹತ್ವ ತಿಳಿಸಿಕೊಡುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಅವರು ಶನಿವಾರ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶ್ರಾವಣ ಸಂಭ್ರಮ-ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಯನುಡಿಗಳನ್ನಾಡಿದರು.

ಮಹಾತ್ಮಗಾಂಧಿಜೀಯವರು ದೇಶಾದ್ಯಂತ ಸ್ವಾತಂತ್ರ್ಯ ಚಳವಳಿ ಆರಂಭಿಸುವ ಮೂಲಕ ೧೯೨೭ರಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂದು ಕೇವಲ ೪೫ ಸಾವಿರ ಜನಸಂಖ್ಯೆ ಹೊಂದಿದ್ದ ಶಿವಮೊಗ್ಗದಲ್ಲಿ ಸುಮಾರು ೪ ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು. ಅಂದು ಧ್ವನಿವರ್ಧಕವಾಗಲಿ ಅಥವಾ ಯಾವುದೇ ಸಂಪರ್ಕ ಸಾಧನಗಳಾಗಲಿ ಇರಲಿಲ್ಲ. ಆದರೂ ಸಹ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಉತ್ಸುಕದಲ್ಲಿ ಕ್ರಿಯಾಶೀಲ ರಾಗಿದ್ದರು. ಪ್ರಸ್ತುತ ಇಂತಹ ಕ್ರಿಯಾಶೀಲತೆ ಕಣ್ಮರೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಆಧುನಿಕತೆ ಬೆಳದಂತೆ ನಮ್ಮ ಕ್ರಿಯಾಶೀಲವಾದ ಬದುಕು ದೂರವಾಗುತ್ತಿದೆ. ನಮ್ಮ ಭವಿಷ್ಯದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ನಮ್ಮಲ್ಲಿ ಕ್ರಿಯಾಶೀಲತೆ ಬೆಳೆಯಲು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಶ್ರಾವಣ ಮಾಸ ಆಚರಣೆ ಕೈಗೊಳ್ಳಲಾಗುತ್ತಿದ್ದು, ಇದರ ಮಹತ್ವ ನಾವುಗಳು ತಿಳಿದುಕೊಳ್ಳಬೇಕಾಗಿದೆ ಎಂದರು.

ಉದ್ಯಮಿ ಬಿ.ಕೆ.ಜಗನ್ನಾಥ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ನಾಗರತ್ನ ಅನಿಲ್‌ ಕುಮಾರ್, ಅನುಪಮಾ ಚನ್ನೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ರೋಟರಿ ಕ್ಲಬ್ ಅಧ್ಯಕ್ಷ ಜಿ.ರಾಘವೇಂದ್ರ ಉಪಾಧ್ಯಾಯ ಸೇರಿದಂತೆ ಇನ್ನಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಎಂ.ಎಸ್.ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಕಾರ್ಯದರ್ಶಿ ಉಮಾಪತಿ ಸ್ವಾಗತಿಸಿ, ಸುಮತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ, ಮಹಾದೇಶ್ವರ, ಸಾಯಿ ಮಂದಿರ, ಶಿರಡಿ ಸಾಯಿಬಾಬಾ, ಬನಶಂಕರಿ ಗಾಯನ, ಭೂಮಿಕ ವೇದಿಕೆ, ಕದಳಿ ವೇದಿಕೆ, ಚುಂಚಾದ್ರಿ ಮಹಿಳಾ ವೇದಿಕೆ, ಉಮಾ ಭಜನಾ, ಸ್ನೇಹ ಮಿಲನ, ತಾಲೂಕು ವೀರಶೈವ ಲಿಂಗಾಯತ, ಚೌಡೇಶ್ವರಿ ದೇವಸ್ಥಾನ, ಕಣಿವೆ ಮಾರಿಯಮ್ಮ, ಬಲಮುರಿ ಗಣಪತಿ, ಲಕ್ಷ್ಮೀ ವೆಂಕಟೇಶ್ವರ ಭಜನಾ, ಆಂಜನೇಯ ಮತ್ತು ಶ್ರೀ ವೀರಾಂಜನೇಯ ತಂಡ ಸೇರಿದಂತೆ ಸುಮಾರು ೧೯ ಮಹಿಳಾ ತಂಡಗಳು ಶ್ರಾವಣ ಸಂಭ್ರಮ-ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.