ರಂಜಾನ್‌ ಅಂಗವಾಗಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

| Published : Apr 12 2024, 01:00 AM IST

ರಂಜಾನ್‌ ಅಂಗವಾಗಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ರಂಜಾನ್ ಹಬ್ಬ ದಲ್ಲಿ ಚಂದ್ರನನ್ನು ನೋಡಿ ಉಪವಾಸ ಆರಂಭಿಸಲಾಗುತ್ತದೆ. ಅಂತೆಯೇ 29 ದಿನ ಪೂರ್ಣಗೊಂಡ ನಂತರ ಚಂದ್ರನ ನೋಡಿ ಉಪವಾಸ ಅಂತ್ಯವಾಗುತ್ತದೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಉಪಾಹಾರ ಸೇವಿಸುವುದು, ನಂತರ ಸಂಜೆ ಸೂರ್ಯ ಮುಳುಗಿದ ನಂತರ ಆಹಾರ ಸೇವಿಸಲಾಗುತ್ತದೆ. ಬೆಳಗ್ಗೆ ಪ್ರಾರ್ಥನೆಗೂ ಮುನ್ನ ಶೀರ್ ಕುವಾರ್‌ ಸೇವಿಸುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ರಂಜಾನ್‌ ಅಂಗವಾಗಿ ಗುರುವಾರ ನಗರದ ವಿವಿಧೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಮುಖವಾಗಿ ತಿಲಕ್‌ ನಗರದ ಈದ್ಗಾ ಮೈದಾನದಲ್ಲಿ ಸಹ್ರಾರು ಮಂದಿ ಮುಸ್ಲಿಂ ಬಾಂಧವರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಆಲಂಗಿಸಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಮುಂಜಾನೆಯಿಂದಲೇ ರಾಜೀವ್‌ನಗರದ ನಿಮ್ರಾ ಮಸೀದಿ, ಗೌಸಿಯಾನಗರದ ಈದ್ಗಾ ಮೈದಾನ, ತಿಲಕ್‌ನಗರದ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥಿಸಿದರು. ಈ ವೇಳೆ ಸರ್‌ ಖಾಜಿ ಮಹಮದ್‌ ಉಸ್ಮಾನ್‌ ಷರೀಫ್‌ ಅವರು, ಶುಭ ಸಂದೇಶ ನೀಡಿದರು.

ಸುಮಾರು ಒಂದು ತಿಂಗಳ ಕಾಲ ರಂಜಾನ್‌ ಅಂಗವಾಗಿ ಉಪವಾಸವಿದ್ದ ಮುಸ್ಲಿಮರು ಈದ್ ಉಲ್ ಫಿತರ್‌ ಆಚರಿಸಿ, ಪ್ರಾರ್ಥನೆ ಸಲ್ಲಿಸಿದ ಬಳಿಕ ಇಫ್ತಾರ್‌ ಕೂಟ ಆಯೋಜಿಸಿ ಬೋಜನ ಸವಿದರು.

ಮೈದಾನ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿಯೂ ಬಡವರು ಶ್ರೀಮಂತರೆನ್ನದೆ ಹಬ್ಬದಲ್ಲಿ ಪಾಲ್ಗೊಂಡು, ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಪ್ರಾರ್ಥನೆಗೆ ತೆರಳುವ ಮುನ್ನ ಸಮುದಾಯದ ಉಳ್ಳವರು, ಬಡವರಿಗೆ ತಮ್ಮ ದುಡಿಮೆಯ ಇಂತಿಷ್ಟು ಅಂಶವನ್ನು ದಾನವಾಗಿ ನೀಡಿದರು. ಇನ್ನು ಕೆಲವರು ಗೋಡಂಬಿ, ದ್ರಾಕ್ಷಿ, ಖರ್ಜೂರ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.

ರಂಜಾನ್ ಹಬ್ಬ ದಲ್ಲಿ ಚಂದ್ರನನ್ನು ನೋಡಿ ಉಪವಾಸ ಆರಂಭಿಸಲಾಗುತ್ತದೆ. ಅಂತೆಯೇ 29 ದಿನ ಪೂರ್ಣಗೊಂಡ ನಂತರ ಚಂದ್ರನ ನೋಡಿ ಉಪವಾಸ ಅಂತ್ಯವಾಗುತ್ತದೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಉಪಾಹಾರ ಸೇವಿಸುವುದು, ನಂತರ ಸಂಜೆ ಸೂರ್ಯ ಮುಳುಗಿದ ನಂತರ ಆಹಾರ ಸೇವಿಸಲಾಗುತ್ತದೆ. ಬೆಳಗ್ಗೆ ಪ್ರಾರ್ಥನೆಗೂ ಮುನ್ನ ಶೀರ್ ಕುವಾರ್‌ ಸೇವಿಸುತ್ತಾರೆ. ಶಾವಿಗೆ, ಹಾಲು, ಕೋವಾ, ಕರ್ಜೂರ ಸೇರಿದಂತೆ ಇನ್ನಿತರ ಒಣಗಿಸಿದ ಹಣ್ಣುಗಳನ್ನು ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಈ ತಿನಿಸು ಈ ಹಬ್ಬದ ಒಂದು ವಿಶಿಷ್ಟ ಖಾದ್ಯ.

ರಾಜೀವ್ ನಗರ, ಮಾದೇಗೌಡ ವೃತ್ತ, ಎನ್.ಆರ್. ಮೊಹಲ್ಲಾ, ಕೆಸರೆ, ಉದಯಗಿರಿ ಸೇರಿದಂತೆ ಹಲವೆಡೆ ಹಬ್ಬದ ಸಡಗರ ಹೆಚ್ಚಾಗಿ ಕಂಡುಬಂತು. ಈ ಬಡಾವಣೆಗಳಲ್ಲಿ ಹಬ್ಬದ ಅಂಗವಾಗಿ ವಿಶೇಷ ತಿಂಡಿ ತಿನಿಸುಗಳ ಮಾರಾಟ ಜೋರಾಗಿತ್ತು.

ಬಿಗಿ ಬಂದೋಬಸ್ತ್

ರಂಜಾನ್‌ ಪ್ರಾರ್ಥನೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನ, ರಾಜೀವನಗರ, ಎನ್‌.ಆರ್‌. ಮೊಹಲ್ಲಾ, ಉದಯಗಿರಿ ಸೇರಿದಂತೆ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಪ್ರಾರ್ಥನಾ ಸ್ಥಳದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಲಕ್ಷ್ಮಣ್‌ ಭಾಗಿ

ಸಾಮೂಹಿಕ ಪ್ರಾರ್ಥನೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಕೂಡ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ಎಲ್ಲಾ ಮುಸ್ಲಿಂ ಬಾಂಧವರಿಗೂ ಶುಭಾಶಯ ತಿಳಿಸಿದರು. ಈ ವೇಳೆ ಕಾಂಗ್ರೆಸ್‌ಸಮಿತಿ ಅಲ್ಪಸಂಖ್ಯಾತರ ವಿಭಾಗದ ಮುಖಂಡರು ಇದ್ದರು.