ಮಹಿಷಿ ವರದಿಯಂತೆ ಸ್ಥಳೀಯರಿಗೆ ಶೇ.92ರಷ್ಟು ಉದ್ಯೋಗ: ಉಡುಪಿ ಡಿಸಿ

| Published : Dec 20 2024, 12:48 AM IST

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಶೇ.92ರಷ್ಟು ಉದ್ಯೋಗಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಉದ್ಯೋಗ ದೊರೆಯುವಂತೆ ಅನುಕೂಲವಾಗುವಂತೆ, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಭೂಮಿ, ವಿದ್ಯುಚ್ಛಕ್ತಿ, ರಸ್ತೆ, ನೀರು ಮತ್ತಿತರ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಈಗಾಗಲೇ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 155 ಎಕ್ರೆಗೂ ಹೆಚ್ಚು ಭೂಮಿ ಗುರುತಿಸಿದ್ದು, ಅದರ ಸ್ವಾಧೀನ ಪ್ರಕ್ರೀಯೆಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಿ, ಭೂಮಿಯನ್ನು ಕೆ.ಐ.ಡಿ.ಬಿ.ಗೆ ಹಸ್ತಾಂತರಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ಬೆಳಪು ಕೈಗಾರಿಕಾ ಪ್ರದೇಶ ಸಂಪರ್ಕ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಲಾದ ಜಮೀನಿನ ಪರಿಹಾರವನ್ನು ವಿತರಿಸಲು ಕಳೆದ ಸಭೆಯಲ್ಲಿ ಸೂಚಿಸಿದ್ದರೂ, ಇನ್ನೂ ವಿತರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಒಂದು ತಿಂಗಳ ಒಳಗಾಗಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕು ಎಂದು ಸೂಚನೆ ನೀಡಿದರು.ಮಿಯಾರು ಕೈಗಾರಿಕಾ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲು ಸೂಚಿಸಿದರು.ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಂದಂತಹ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದರು.ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಕೆಐಎಡಿಬಿ ಅಧಿಕಾರಿ ಶ್ರೀನಿವಾಸಮೂರ್ತಿ, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.