ಸಾರಾಂಶ
ಪಾಂಡವಪುರ ಪಟ್ಟಣದ ಒಳಚರಂಡಿ ಕಾಮಗಾರಿಯ ಮಲೀನ ನೀರು ಸಂಸ್ಕರಣಾ ಘಟಕಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಜಮೀನಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಲು ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಆದೇಶದಂತೆ ಕೋರ್ಟ್ ಅಮೀನರು ಕಚೇರಿ ಪಿಠೋಪಕರಣಗಳನ್ನು ಸೋಮವಾರ ಜಪ್ತಿ ಮಾಡಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಒಳಚರಂಡಿ ಕಾಮಗಾರಿಯ ಮಲೀನ ನೀರು ಸಂಸ್ಕರಣಾ ಘಟಕಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಜಮೀನಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಲು ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಆದೇಶದಂತೆ ಕೋರ್ಟ್ ಅಮೀನರು ಕಚೇರಿ ಪಿಠೋಪಕರಣಗಳನ್ನು ಸೋಮವಾರ ಜಪ್ತಿ ಮಾಡಿದರು.ಪಟ್ಟಣದ ಹೊರವಲಯದ ಬನ್ನಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ 2009 ರಲ್ಲಿ ರೈತರ 5 ಎಕರೆ 20 ಗುಂಟೆ ಜಮೀನನ್ನು ನೀರು ಸರಬರಾಜು ಒಳಚರಂಡಿ ಮಂಡಳಿ ಸ್ವಾಧೀನ ಪಡಿಸಿಕೊಂಡು ಪುರಸಭೆಗೆ ಹಸ್ತಾಂತರಿಸಿತ್ತು.
ವಶಪಡಿಸಿಕೊಂಡ ಜಮೀನಿಗೆ ಸರ್ಕಾರ ನಿಗದಿಪಡಿಸಿದ ಪರಿಹಾರದ ಮೊತ್ತ ಕಡಿಮೆಯಾಯಿತು ಎಂದು ರೈತರು ನ್ಯಾಯಾಲಯದ ಮೆಟ್ಟಿಲು ಏರಿ ಸೂಕ್ತ ಪರಿಹಾರಕ್ಕಾಗಿ ದಾವೆ ಹೂಡಿದ್ದರು. ರೈತರ ಮನವಿ ಪುರಸ್ಕರಿಸಿದ ನ್ಯಾಯಾಲಯ ಚದರ ಅಡಿಗೆ 375 ದರ ನಿಗದಿಪಡಿಸಿ ಆದೇಶಿಸಿತ್ತು.ಅದರಂತೆ ಪರಿಹಾರ ಪರಿಹಾರ ನೀಡಲು ಕ್ರಮ ವಹಿಸಲು ಉಪ ವಿಭಾಗಾಧಿಕಾರಿಗಳ ಕಚೇರಿ ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕಚೇರಿಯ ಚೇರು, ಟೇಬಲ್, ಕುರ್ಚಿ, ಗಣಕ ಯಂತ್ರ, ಪ್ರಿಂಟರ್ ಸೇರಿದಂತೆ ಇತರೆ ಸ್ಥಿರಾಸ್ತಿಗಳನ್ನು ಕೋರ್ಟ್ ಅಮಿನರು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
2.87 ಕೋಟಿಗಾಗಿ ನ್ಯಾಯಾಲಯಕ್ಕೆ:ನ್ಯಾಯಾಲಯದ ಆದೇಶ ಪಾಲನೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಮೀನು ನೀಡಿರುವ ರೈತ ಸತ್ಯನಾರಾಯಣ ತಮ್ಮ ವಕೀಲರ ಮೂಲಕ ಕೋರ್ಟ್ ಮೆಟ್ಟಲು ಏರಿದ್ದರು.
ಸತ್ಯಾನಾರಾಯಣ್ ಅವರಿಗೆ ಪರಿಹಾರದ ಮೊತ್ತ 5.87 ಕೋಟಿ ಸಿಗಬೇಕಿದ್ದು, ಈ ಪೈಕಿ ಈವರೆಗೂ 3 ಕೋಟಿ ಸಂದಾಯವಾಗಿದೆ. ಉಳಿಕೆ 2.87 ಮೊತ್ತಕ್ಕಾಗಿ ಕೋರ್ಟ್ ಮೋರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯ ಉಪವಿಭಾಗಾಧಿಕಾರಿಗಳ ಕಚೇರಿ ಚರ ವಸ್ತುಗಖ ಜಪ್ತಿಗೆ ಆದೇಶ ನೀಡಿದೆ.ಜಪ್ತಿ ಇದೇ ಮೊದಲೇನಲ್ಲ :
ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ಮೊತ್ತ ನೀಡಲು ಕಳೆದ ಒಂದು ಎರಡು ವರ್ಷಗಳಿಂದ ಸಾಧ್ಯವಾಗದ ಪರಿಣಾಮ ನ್ಯಾಯಾಲಯ ನಾಲ್ಕು ಬಾರಿ ಜಪ್ರಿಗೆ ಆದೇಶ ನೀಡಿದೆ. ಈ ಹಿಂದೆ ಉಪವಿಭಾಗಾಧಿಕಾರಿಗಳ ವಾಹನ ಹಾಗೂ ಪುರಸಭೆ ಸ್ಥಿರಾಸ್ತಿ ಕೂಡ ಜಪ್ತಿ ಮಾಡಲಾಗಿತ್ತು.ಈ ವೇಳೆ ವಕೀಲ ಲೋಕೇಶ್, ಕೋರ್ಟ್ ಅಮಿನರಾದ ನರಸಿಂಹಮೂರ್ತಿ, ಸತೀಶ್ ಕುಮಾರ್, ವಿನಯ್, ಸಿದ್ದರಾಜು ಇದ್ದರು.