ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ

| Published : Nov 13 2024, 12:47 AM IST / Updated: Nov 13 2024, 12:48 AM IST

ಸಾರಾಂಶ

ನಾವು ಕೇವಲ ನವೆಂಬರ್ ಕನ್ನಡಿಗರಾಗದೇ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ಎಂದು ಕಾಂಗ್ರೆಸ್ ಮುಖಂಡ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಸಿ.ಬಿ.ಅಸ್ಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಾವು ಕೇವಲ ನವೆಂಬರ್ ಕನ್ನಡಿಗರಾಗದೇ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ಎಂದು ಕಾಂಗ್ರೆಸ್ ಮುಖಂಡ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಸಿ.ಬಿ.ಅಸ್ಕಿ ಹೇಳಿದರು.

ಪಟ್ಟಣದ ಪುರಸಭೆ ಎದುರಿಗೆ ಚಿಗುರು ಬಳಗದಿಂದ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲೇ ಮಾತನಾಡುತ್ತ, ಬರೆಯುತ್ತ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವುದರ ಜತೆಗೆ, ಅನ್ಯ ಭಾಷಿಕದವರಿಗೇ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಭಾಷೆ, ನೆಲ, ಜಲ,ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅಂದಾಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯುತ್ತೇವೆ. ಹಚ್ಚಹಸುರಿನ ಸುಂದರ ಬೆಟ್ಟ-ಗುಡ್ಡಗಳ, ನದಿಗಳು ಹರಿಯುವ, ಸಾಧು-ಸಂತರು, ದಾಸರು-ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯವಂತರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.

ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಕೀರ್ತಿ ಗಳಿಸಿದ ಇತರ ವ್ಯಕ್ತಿಗಳಲ್ಲಿ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಶಿವರಾಮ ಕಾರಂತ, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯರವರು ಸೇರಿದಂತೆ ಅನೇಕ ಪ್ರಮುಖರು ಕನ್ನಡ ಏಕಿಕರಗೊಳಿಸಿದ್ದರಿಂದ ಇಂದು ನ.1 ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರೆ ತಪ್ಪಾಗಲಾರದು ಎಂದು ವಿವರಿಸಿದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವೈ.ಎಚ್ ವಿಜಯಕರ, ತಾಲೂಕು ವೀರಶೈಲ ಲಿಂಗಾಯ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಅಶೋಕ ನಾಡಗೌಡ, ಕಾರ್ ಚಾಲಕರ ಸಂಘದ ಅಧ್ಯಕ್ಷ ಅಪ್ಪುಗೌಡ, ಪೀರಸಾ ಮುಲ್ಲಾ, ಪಿಡಿಒ ಆನಂದ ಹಿರೇಮಠ, ಸಂಗಣ್ಣ ಮೇಲಿಮನಿ, ಖ್ಯಾತ ಕಿರುತೆರ ಹಾಗೂ ಚಲನಚಿತ್ರ ಹಾಸ್ಯಕಲಾವಿದರಾದ ಶ್ರೀಶೈಲ ಹೂಗಾರ, ಗೋಪಾಲ ಹೂಗಾರ, ಕಲಾವಿದರಾದ ವಿನಾಯಕ ಭಟ್ಟ, ಶರಣು ಅಮರಣ್ಣವರ, ಮುನಿರ ಅವಟಿಗೇರಿ, ನಿಜಾಮ ಬಾಗೇವಾಡಿ, ಅಟೋ ಕುಮಾರ, ವಿಷ್ಟು ಲಮಾಣಿ, ಹನುಮಂತ ಮಹಾಲಿಂಗಪೂರ, ಮಲ್ಲು ತಟ್ಟಿ, ದೀಪಾ ರತ್ನಶ್ರೀ, ಸುನಿಲ ಬಿಸ್ನಾಳ, ಶಿವರಾಜ ಹೂಗಾರ, ಕಾಂತು ಹೂಗಾರ ಸೇರಿದಂತೆ ಹಲವರು ಇದ್ದರು.ಕಳೆದ ಮೂರು ವರ್ಷಗಳಿಂದ ಸ್ಥಳೀಯ ಕಲಾವಿದರು ಸೇರಿಕೊಂಡು ಕನ್ನಡ ರಾಜ್ಯೋತ್ಸವವನ್ನು ಪುನಿತ ರಾಜಕುಮಾರ ನೆನಪಲ್ಲಿ ಪುನೀತ ನಮನ ಕಾರ್ಯಕ್ರಮ ಆಯೋಜಿಸಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿರುವುದು ತುಂಬಾ ಸಂತಸ ತಂದಿದೆ. ಈ ನಮ್ಮ ಕನ್ನಡದ ಸಾಹಿತ್ಯ, ಸಂಸ್ಕೃತಿ ಪರಂಪರೆಯ ಶ್ರೀಮಂತಿಕೆಯಲ್ಲಿ ಇಂದಿನ ಯುವ ಪಿಳೆಗೆಗಳಿಗೆ ತಿಳಿಯುವಂತೆ ಮಾಡಿ ಪ್ರೇರೇಪಿಸಬೇಕಿದೆ.

-ಸಿ.ಬಿ.ಅಸ್ಕಿ,

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.