ಸಾರಾಂಶ
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ, ಅವರ 45 ವರ್ಷಗಳ ರಾಜಕೀಯ ಜೀವನವು ಅಕ್ರಮ ನಿವೇಶನಗಳ ವಿವಾದದಿಂದಾಗಿ ಅಂತ್ಯಗೊಂಡಿದೆ ಎಂದು ಹೇಳಿದ್ದಾರೆ.
ದಾವಣಗೆರೆ : ಎರಡೂವರೆ ತಿಂಗಳ ಹಿಂದೆಯೇ ಸಿದ್ದರಾಮಯ್ಯ ಸಾಹೇಬರಿಗೆ ನಿಮ್ಮ ಹೆಂಡತಿ ಹೆಸರಿನಲ್ಲಿ ತೆಗೆದುಕೊಂಡ 14 ಅಕ್ರಮ ನಿವೇಶನಗಳನ್ನು ವಾಪಸ್ ಕೊಟ್ಟುಬಿಡಿ ಎಂದೆವು. ಆದರೆ, ₹62 ಕೋಟಿ ಕೊಟ್ಟರೆ ವಾಪಸ್ ಕೊಡುತ್ತೇನೆಂದು ಸಿದ್ದರಾಮಯ್ಯನವರ ಬಾಯಲ್ಲಿ ಹಣದ ಮಾತು ಬಂದಿತು. ಆವಾಗಲೇ, ಅವರ 45 ವರ್ಷಗಳ ರಾಜಕೀಯ ಜೀವನವೇ ಅಂತ್ಯವಾಯಿತು ಎಂದು ಮೈಸೂರು ಕ್ಷೇತ್ರದ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದ ಜಿಎಂಐಟಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ನಿವೇಶನಗಳನ್ನು ವಾಪಸ್ ಮುಡಾಗೆ ಕೊಟ್ಟರೆ, ಆಗ ತಾರ್ಕಿಕ ಅಂತ್ಯ ಕಾಣುತ್ತೆ. ಯಾರೆಲ್ಲಾ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದಾರೋ ಅವೆಲ್ಲವೂ ಹೊರಗೆ ಬರುತ್ತವೆಂದು ಹೇಳಿದ್ದೆ ಎಂದರು.
ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ರಾಜಕಾರಣಿ ಅಂತಲೇ ನಂಬಿದ್ದರು. ಆದರೆ, ಅದೇ ಸಿದ್ದರಾಮಯ್ಯ ಪ್ರಾಮಾಣಿಕತೆಯು ಅದೇ ಬಾಯಿಂದ ಬಂದ ಮಾತುಗಳನ್ನು ಸುಳ್ಳಾಗಿಸಿದವು. ಈಗ ಕೇಸ್‌ಗೆ ಕೌಂಟರ್ ಕೇಸ್ ಅಂತಾ ಮಾತನಾಡುತ್ತಿದ್ದಾರೆ ಎಂದು ಪ್ರತಾಪ್ ಟೀಕಿಸಿದರು.
ಕಳೆದ ವರ್ಷ ಪೇ ಸಿಎಂ, ಬಿಟಿ ಕಾಯಿನ್, ಶೇ.40 ಕಮಿಷನ್ ಅಂತಾ ನೀವೇ ಕ್ಯಾಂಪೇನ್ ಮಾಡಿದ್ದಿರಿ. ಆದರೆ, ಒಂದೂವರೆ ವರ್ಷದಲ್ಲಿ ನಿಮ್ಮದೇ ಆರೋಪದಂದೆ ಒಂದು ಸಣ್ಣ ಸಾಕ್ಷ್ಯವನ್ನಾದರೂ ಹುಡುಕಲು ಸಾಧ್ಯವಾಗಿದೆಯೇ? ಪೊಳ್ಳು ಧಮಕಿ ಹಾಕುತ್ತಿರುವ ಸಿದ್ದರಾಮಯ್ಯವರೇ ಯಾರು ಯಾರ ಮೇಲೆ ಎಷ್ಟು ಕೇಸ್ ಹಾಕುತ್ತೀರೋ ಹಾಕಿ. ನೀವೆಲ್ಲಾ ಟಾಪ್ ರಾಜಕಾರಣಿಗಳು, ಮ್ಯುಚುವೆಲ್ ಅಂಡರ್ ಸ್ಟ್ಯಾಂಡಿಂಗ್ ಇರುತ್ತದೆ. ಬೇರೆಯವರಿಗೆ ತೋರಿಸುತ್ತಾ, ನೀವು ಸಪೋರ್ಟ್ ಮಾಡುತ್ತಿದ್ದೀರಿ. ನಿಮಗೆ ಅಂತಹವರು ಸಪೋರ್ಟ್ ಮಾಡುತ್ತಾರೆ. ನೀವೆಲ್ಲಾ ಹಿರಿಯರು, ನಿಮ್ಮಗಳ ಹಣೆಬರಹ ರಾಜ್ಯದ ಜನತೆ ನೋಡಿದ್ದಾರೆ. ಸಿದ್ದರಾಮಯ್ಯ ಸಾಹೇಬರೇ ನೀವು ರಾಜೀನಾಮೆ ಕೊಟ್ಟು, ಮುಕ್ತ ನ್ಯಾಯಸಮ್ಮತ ತನಿಖೆಗೆ ಅವಕಾಶ ಮಾಡಿಕೊಡಿ ಎಂದು ಪ್ರತಾಪ ಸಿಂಹ ಒತ್ತಾಯಿಸಿದರು.
ಸಿದ್ದು ತಾಲಿಬಾನ್ ಆಡಳಿತ ವಿರುದ್ಧ ಕೈ ಕಟ್ಟಿ ಕುಳಿತಿಲ್ಲ: ಸಿಂಹ
ದಾವಣಗೆರೆ: ರಾಜ್ಯದಲ್ಲಿ ಸಿದ್ದರಾಮಯ್ಯನವರ ತಾಲಿಬಾನ್ ಸರ್ಕಾರದ ವಿರುದ್ಧ ನಾವ್ಯಾರೂ ಕೈಕಟ್ಟಿ ಕುಳಿತುಕೊಳ್ಳಲ್ಲ. ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದ ಜಿಎಂಐಟಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ಹಿಂದು ಕಾರ್ಯಕರ್ತ ಸತೀಶ ಪೂಜಾರಿ ವಂಶಾವಳಿಯನ್ನು ಪೊಲೀಸರು ಯಾಕೆ ಕೇಳಿದ್ದೀರಿ? ಪೊಲೀಸ್ ಇಲಾಖೆಗೆ ಸತೀಶ ಪೂಜಾರಿ ವಂಶವೃಕ್ಷ ಯಾಕೆ ಬೇಕು? ಶರಣು ಪಂಪು ಬಂಧನಕ್ಕೆ ಆರೆಸ್ಸೆಸ್ ಕಚೇರಿಗೆ ನುಗ್ಗುವ ಪೊಲೀಸರು, ಪೆಟ್ರೋಲ್ ಬಾಂಬ್ ಎಸೆದವರ ಬಂಧನಕ್ಕೆ ಯಾವ ಮಸೀದಿ ಒಳಗೆ ಪೊಲೀಸರು ನುಗ್ಗಿದ್ದಿರಿ? ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿನ ಎಲ್ಲ ಸೌಲಭ್ಯ ಪಡೆದರೂ, ಪ್ಯಾಲೇಸ್ತೀನ್ ಧ್ವಜ ಮೇಲೆ ಹೊಂದಿದ್ದವರು ಬೇಕಿದ್ದರೆ ಪ್ಯಾಲೇಸ್ತೀನ್‌ಗೋ, ಗಾಜಾಗೋ ಹೋಗಿ, ಹೋರಾಟ ಮಾಡಲಿ, ಪಾಕಿಸ್ಥಾನಕ್ಕೆ ಬೆಂಬಲಿಸುವ ಕಾಂಗ್ರೆಸ್ಸಿನ ರಾಜ್ಯ ಸರ್ಕಾರ ಇನ್ನು ಬಹಳ ದಿನ ಉಳಿಯುವುದಿಲ್ಲ ಎಂದರು.
ಉಪ ಚುನಾವಣೆ ರಾಜ್ಯದಲ್ಲಿ ನಡೆಯುತ್ತದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನಮ್ಮೆಲ್ಲಾ ಹಿಂದು ಸಂಘಟನೆ ಮುಖಂಡರು, ಕಾರ್ಯಕರ್ತರ ಮೇಲೆ ದಾಖಲಿಸಿರುವ ಕೇಸ್‌ಗಳನ್ನು ಹಿಂಪಡೆಯುತ್ತೇವೆ
- ಪ್ರತಾಪ ಸಿಂಹ, ಮಾಜಿ ಸಂಸದ