ಚುನಾವಣೆ ಬಂದಾಗಲಷ್ಟೇ ಹಿಂದೂ- ಮುಸ್ಲಿಂ ಮುನ್ನೆಲೆಗೆ: ಲಾಡ್‌

| Published : Feb 25 2024, 01:51 AM IST

ಸಾರಾಂಶ

ಚುನಾವಣೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಅದನ್ನು ನಡೆಸುತ್ತಿಲ್ಲ. ಮೋದಿ ಸರ್ಕಾರ ಬಂದು 10- ವರ್ಷವಾಗಿದೆ. ಏನೆಲ್ಲ ಅಭಿವೃದ್ಧಿಯಾಗಿದೆ ಅದರ ಬಗ್ಗೆ ಚರ್ಚೆ ನಡೆಸಲಿ ಎಂದು ಸಚಿವ ಸಂತೋಷ ಲಾಡ್ ಆಗ್ರಹಿಸಿದರು.

ಹುಬ್ಬಳ್ಳಿ: ಚುನಾವಣೆ ಬಂದಾಗ ಹಿಂದೂ- ಮುಸ್ಲಿಂ ಆಗುತ್ತದೆ. ಇದನ್ನು ಬಿಜೆಪಿಯವರು ಮಾಡುವುದು ಎಂಬುದು ಗೊತ್ತು. ಅವರು ಬರೀ ಭಾವನಾತ್ಮಕ ವಿಷಯಗಳನ್ನೇ ಇಟ್ಟುಕೊಂಡು ಚುನಾವಣೆ ನಡೆಸುತ್ತಾ ಬಂದಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗಲೇ ರಾಮಮಂದಿರ, ಹಿಂದೂ- ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನದ ವಿಷಯಗಳೆಲ್ಲ ಬರುತ್ತವೆ. ಇದೇ ಅವರು ಮಾಡುವುದು. ಯಾವುದೇ ಚುನಾವಣೆಯಾದರೂ ಭಾವನಾತ್ಮಕ ವಿಷಯಗಳನ್ನೇ ಎತ್ತಿಕೊಂಡು ಚುನಾವಣೆ ನಡೆಸುತ್ತಾರೆ ಎಂದರು.

ಚುನಾವಣೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಅದನ್ನು ನಡೆಸುತ್ತಿಲ್ಲ. ಮೋದಿ ಸರ್ಕಾರ ಬಂದು 10- ವರ್ಷವಾಗಿದೆ. ಏನೆಲ್ಲ ಅಭಿವೃದ್ಧಿಯಾಗಿದೆ ಅದರ ಬಗ್ಗೆ ಚರ್ಚೆ ನಡೆಸಲಿ. ಮೇಕ್‌ ಇನ್‌ ಇಂಡಿಯಾ ಬಗ್ಗೆ ಏನೆಲ್ಲ ಹೇಳಿದರು. ಆದರೆ ಏನಾಗಿದೆ. ಮೇಕ್‌ ಇನ್‌ ಇಂಡಿಯಾಗೆ 450 ಕೋಟಿ ಖರ್ಚಾಗಿದೆ. ಎಲ್ಲ ಸರಕುಗಳು ಈಗಲೂ ಚೀನಾದಿಂದಲೇ ಬರುತ್ತವೆ. ಮೇಕ್‌ ಇನ್‌ ಇಂಡಿಯಾ ಎಲ್ಲಿದೆ? ಇದರ ಬಗ್ಗೆ ಏಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಭಾರತ ಪಾಸ್ಪೋರ್ಟ್ ಪವರ್ 85ನೇ ಸ್ಥಾನಕ್ಕಿದೆ. ಪವರ್‌ಫುಲ್ ಪ್ರಧಾನಿ ಇದ್ದಾರೆ. ಹಾಗಾದರೆ ನಮ್ಮದು ಮೊದಲನೆಯ ಸ್ಥಾನದಲ್ಲಿ ಇರಬೇಕಿತ್ತು ಅಲ್ವಾ? ಅದ್ಯಾಕೆ ಇಲ್ಲ ಎಂದು ಪ್ರಶ್ನಿಸಿದರು.

ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ ಗೊತ್ತ? ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕು ಆದರೆ ಈಗ ಚರ್ಚೆ ಆಗುತ್ತಿರುವುದೇನು? ಎಂದು ಪ್ರಶ್ನಿಸಿದರು. ಅನಂತಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಹೋರಾಟ ಯಾವುದು? ಖಲಿಸ್ತಾನಿಗಳ ಹೋರಾಟ ಯಾವುದು ಅವರನ್ನೇ ಕೇಳಬೇಕು ಎಂದರು.

ರೈತರ ಸಾಲಮನ್ನಾ, ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ನನಗಂತೂ ಇದು ಆಗಿದ್ದು ಎಲ್ಲೂ ಕಂಡು ಬಂದಿಲ್ಲ. ನದಿಗಳ ಜೋಡಣೆ ಎಂದು ಹೇಳಿದ್ದರು. ಆದರೆ ಆ ಕೆಲಸವಾಗಿದೆಯಾ? ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಹಳ್ಳ ಹಿಡಿದಿದೆ. ಸಾಲ ಹೆಚ್ಚಾಗಿದೆ ಎಂದು ಹೇಳುತ್ತಾರೆ. ದೇಶದ ಸಾಲ ಎಷ್ಟಿದೆ ಎಂದು ಜೋಶಿ ಹಾಗೂ ಬಿಜೆಪಿಯವರು ಹೇಳಲಿ ಎಂದು ಸವಾಲೆಸೆದರು.