ಶ್ರೀ ನಿರ್ಮಲಾನಂದನಾಥ ಶ್ರೀಗಳ ಜ್ವಾಲಾಪೀಠಾರೋಹಣ

| Published : Mar 24 2024, 01:31 AM IST

ಶ್ರೀ ನಿರ್ಮಲಾನಂದನಾಥ ಶ್ರೀಗಳ ಜ್ವಾಲಾಪೀಠಾರೋಹಣ
Share this Article
  • FB
  • TW
  • Linkdin
  • Email

ಸಾರಾಂಶ

ಸಹಸ್ರಾರು ಭಕ್ತರನಡುವೆ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಸಿದ್ಧಸಿಂಹಾಸನರೂಢರಾಗಿ ದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಶ್ರೀಮಠದ ಪೀಠಾಧ್ಯಕ್ಷರು ಜಾತ್ರಾ ಸಮಯದಲ್ಲಿ ಜ್ವಾಲಾಪೀಠಾರೋಣ ಮಾಡುವುದು ಸಂಪ್ರದಾಯ. ಪರಶಿವರನು ಆದಿಚುಂಚನಗಿರಿಯಲ್ಲಿ ಬಂದು ತಪಸ್ಸು ಮಾಡಿದ ಸ್ಥಳವೇ ಜ್ವಾಲಾಪೀಠ ಎಂಬ ಉಲ್ಲೇಖವಿದೆ.

ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಸರ್ವಾಲಂಕಾರ ಭೂಷಿತರಾಗಿ ಶನಿವಾರ ಸಂಜೆ ಜ್ವಾಲಾಪೀಠಕ್ಕೆ ಪೂಜೆ ಸಲ್ಲಿಸಿ ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ನೆರೆದಿದ್ದ ಭಕ್ತರು ಕೈಲಾಸದಲ್ಲಿ ಪರಶಿವನನ್ನೇ ದರ್ಶನ ಮಾಡಿದ ಪುಣ್ಯವೆಂದು ಭಾವಿಸಿ ಶ್ರೀಗಳ ಜ್ವಾಲಾಪೀಠಾರೋಹಣವನ್ನು ಕಣ್ತುಂಬಿಕೊಂಡರು.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿನ್ನದ ಕಿರೀಟದೊಂದಿಗೆ ಸರ್ವಾಲಂಕಾರ ಭೂಷಿತರಾಗಿದ್ದ ನಿರ್ಮಲಾನಂದನಾಥಶ್ರೀಗಳು ಶ್ರೀಮಠದ ಸಿದ್ಧ ಸಿಂಹಾಸನವನ್ನೇರಿ ಭಕ್ತರಿಗೆ ದರ್ಶನ ನೀಡುವುದಕ್ಕೂ ಮುನ್ನ, ಸಹಸ್ರಾರು ಭಕ್ತರನಡುವೆ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಸಿದ್ಧಸಿಂಹಾಸನರೂಢರಾಗಿ ದರ್ಶನ ನೀಡಿದರು.

ಈ ವೇಳೆ ಶ್ರೀಮಠದ ವೇದಪಂಡಿತರು, ವಟುಗಳು, ಷೋಡೋಶೋಪಚಾರ ಪೂಜೆ ಪುರಸ್ಕಾರ ನೆರವೇರಿಸಿದರು. ನಂತರ ಶ್ರೀಗಳು ಭಕ್ತರಿಗೆ ವಿಭೂತಿ ತಿಲಕವನ್ನಿಡುವ ಮೂಲಕ ಹರಸಿ ಆಶೀರ್ವದಿಸಿದರು.

ಬಳಿಕ ಚಂದ್ರಮಂಡಲೋತ್ಸವ ಪೂಜೆ ನೆರವೇರಿತು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈನತ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಸಾಧು ಸಂತರು ಮತ್ತು ಸಹಸ್ರಾರು ಭಕ್ತರು ಹಾಜರಿದ್ದರು.