ವಿವಿಧ ಬೇಡಿಕೆಗಳ ಸಂಬಂಧ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ನೌಕರರ ಸಂಘದ ನಿಯೋಗದೊಂದಿಗೆ ದೆಹಲಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಇಲಾಖೆಯ ಕೇಂದ್ರ ಮತ್ತು ರಾಜ್ಯದ ಸಚಿವರು ಜಂಟಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಬಿಡಲು ಸಂಘಟನೆಗಳು ತೀರ್ಮಾನಿಸಿವೆ

ಕನ್ನಡಪ್ರಭ ವಾರ್ತೆ ಬೆಂಗಳೂರು/ಹುಬ್ಬಳ್ಳಿ

ವಿವಿಧ ಬೇಡಿಕೆಗಳ ಸಂಬಂಧ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ನೌಕರರ ಸಂಘದ ನಿಯೋಗದೊಂದಿಗೆ ದೆಹಲಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಇಲಾಖೆಯ ಕೇಂದ್ರ ಮತ್ತು ರಾಜ್ಯದ ಸಚಿವರು ಜಂಟಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಬಿಡಲು ಸಂಘಟನೆಗಳು ತೀರ್ಮಾನಿಸಿವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್‌.ವರಲಕ್ಷ್ಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸ್ವಾತಂತ್ರ್ಯಉದ್ಯಾನದಲ್ಲಿ, ಹುಬ್ಬಳ್ಳಿಯಲ್ಲಿ ಚಿಟಗುಪ್ಪಿ ಆಸ್ಪತ್ರೆ ಆವರಣದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ಎದುರು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಮಂಗಳವಾರ ಸಂಜೆ 6.30ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೂರವಾಣಿ ಕರೆ ಮೂಲಕ ಪ್ರತಿಭಟನಾನಿರತ ಮುಖಂಡರೊಂದಿಗೆ ಮಾತನಾಡಿ, ನೌಕರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಕರ್ನಾಟಕದ ನಾಲ್ವರು ಕೇಂದ್ರ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಭಾಗವಹಿಸಲು ವಿವಿಧ ಸಂಘಟನೆಯ 10 ಜನ ರಾಜ್ಯ ಮುಖಂಡರನ್ನು ಆಹ್ವಾನಿಸಲಾಗಿದೆ. ಅವರು ಬುಧವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಭೆಯಲ್ಲಿ ನಾನು, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದಾಜ್ಲೆ ಹಾಜರಿರುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆದುಕೊಳ್ಳುವುದಾಗಿ ಹುಬ್ಬಳ್ಳಿಯಲ್ಲಿ ಮಹೇಶ ಪತ್ತಾರ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಅಂಗನವಾಡಿ ಘಟಕ ವೆಚ್ಚ ಹೆಚ್ಚಳ ಮಾಡಿ ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. 2018ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2,700 ರು, ಸಹಾಯಕಿಯರಿಗೆ 1,350 ರು. ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ. ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಭೌತಿಕ ಗುರುತು ವ್ಯವಸ್ಥೆ (ಎಫ್‌ಆರ್‌ಎಸ್‌) ರದ್ದು ಮಾಡಬೇಕು. ಇಲ್ಲದಿದ್ದರೆ ಎಫ್‌ಆರ್‌ಎಸ್‌ ಇರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವೈಫೈ ವ್ಯವಸ್ಥೆ ಅಳವಡಿಸಬೇಕು. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಗೆ ಬಳಸಬಾರದು. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂಬುದು ಪ್ರತಿಭಟನಾಕಾರ ಒತ್ತಾಯವಾಗಿದೆ.