ಸಾರಾಂಶ
ಮಾಸಿಕ ₹10 ಸಾವಿರ ಗೌರವಧನ ನೀಡುವ ಕುರಿತು ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ನೂರಾರು ಆಶಾ ಕಾರ್ಯಕರ್ತೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮೂರು ದಿನಗಳ ಅಹೋರಾತ್ರಿ ಧರಣಿ ಆರಂಭಿಸಿದರು.
ಮಾಸಿಕ ಗೌರವಧನ ಹೆಚ್ಚಳ ಆಗ್ರಹ
ರಾಜ್ಯ ಸರ್ಕಾರದ ಧೋರಣೆಗೆ ಖಂಡನೆಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಕೂಡಲೇ ಈಡೇರಿಸಲಿ
ಕನ್ನಡಪ್ರಭ ವಾರ್ತೆ ಬಳ್ಳಾರಿಮಾಸಿಕ ₹10 ಸಾವಿರ ಗೌರವಧನ ನೀಡುವ ಕುರಿತು ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ನೂರಾರು ಆಶಾ ಕಾರ್ಯಕರ್ತೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮೂರು ದಿನಗಳ ಅಹೋರಾತ್ರಿ ಧರಣಿ ಆರಂಭಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಳೆದ ಜ. 7ರಿಂದ 10ನೇ ತಾರೀಖಿನವರೆಗೆ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದಿದ್ದು, ಆಶಾಗಳಿಗೆ 15 ಸಾವಿರ ನಿಶ್ಚಿತ ಗೌರವಧನ ನೀಡಬೇಕು ಎಂದು ಆಗ್ರಹಿಸಲಾಯಿತು. ರಾಜ್ಯದ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಜ. 10 ರಂದು ರಂದು ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಸಭೆ ಮಾಡಿದರು. ಈ ಸಭೆಯಲ್ಲಿ ನಮ್ಮೊಂದಿಗೆ ಆರೋಗ್ಯ ಮಂತ್ರಿಗಳು, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ 10 ಸಾವಿರ ಗೌರವಧನ ನೀಡಲಾಗುವುದು. ಇದಲ್ಲದೆ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಲಿದೆಯಲ್ಲದೆ, ಈ ವರ್ಷದ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಲಾಗುವುದು ಭರವಸೆ ನೀಡಿದ್ದರು. ಆದರೆ, ಈವರೆಗೆ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಜ್ಯ ಸರ್ಕಾರದ ಧೋರಣೆ ಖಂಡಿಸಿದರಲ್ಲದೆ, ಮುಖ್ಯಮಂತ್ರಿಗಳು ತಾವೇ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಈ ಹಿಂದೆ ನಾವು ಪ್ರತಿಭಟನೆ ನಡೆಸಿದ ವೇಳೆ ಆರೋಗ್ಯ ಇಲಾಖೆಯ ಆಯುಕ್ತರು ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳವಾದ ಫ್ರೀಡಂ ಪಾರ್ಕ್‌ಗೆ ಬಂದು ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವುದಾಗಿ ತಿಳಿಸಿದ್ದರು. ಹೀಗಾಗಿಯೇ ನಾವು ಹೋರಾಟವನ್ನು ಹಿಂದಕ್ಕೆ ಪಡೆದಿದ್ದೆವು. ಆದರೆ, ಸರ್ಕಾರ ಭರವಸೆ ನೀಡಿ 7 ತಿಂಗಳು ಕಳೆದರೂ ಈವರೆಗೆ ಸ್ಪಷ್ಟ ಆದೇಶ ಹೊರಬಿದ್ದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಶಾ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಎ.ಶಾಂತಾ ಹಾಗೂ ಜಿಲ್ಲಾಧ್ಯಕ್ಷೆ ಗೀತಾ ಮಾತನಾಡಿ, ಜನತೆ ಮತ್ತು ಸರ್ಕಾರದ ನಿರೀಕ್ಷೆಯಂತೆ ಆಶಾ ಕಾರ್ಯಕರ್ತೆಯರು ತನ್ನ ಸೇವೆಯಿಂದ ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಇವರ ಸೇವೆಗೆ ತಕ್ಕ ಪ್ರತಿಫಲ ನೀಡುತ್ತಿಲ್ಲ. ಸರ್ಕಾರದ ದುಡಿವ ಜನರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬುದಕ್ಕೆ ಆಶಾಗಳ ಮೇಲಿನ ನಿಲುವುಗಳೇ ಕಾರಣ. ಮುಖ್ಯಮಂತ್ರಿಗಳು ಕೂಡಲೇ ಆಶಾ ಕಾರ್ಯಕರ್ತೆರ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ಆಶಾ ಸಂಘದ ಜಿಲ್ಲಾ ಪ್ರಮುಖರಾದ ಭಾಗ್ಯ, ಅನ್ನಪೂರ್ಣ, ಅಶ್ವಿನಿ, ರೇಖಾ, ರೇಷ್ಮಾ, ಕವಿತಾ, ರಾಮಕ್ಕ, ನವೀನಾ, ನಾಗಮ್ಮ, ವೀಣಾ, ಶಾರದಮ್ಮ ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದಾರೆ.