ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ಗೌರವಧನ ನಿಗದಿಪಡಿಸಬೇಕು, ಮೂಲಭೂತ ಸಮಸ್ಯೆಗಳನ್ನು ಈಡೇರಿಸುವವರೆಗೆ ‘ಸಮಸ್ತ’ ಆ್ಯಪ್‌ನಲ್ಲಿ ಕೆಲಸ ಮಾಡಲು ಬಲವಂತ ಮಾಡುವುದನ್ನು ನಿಲ್ಲಿಸಬೇಕು ಹಾಗೂ ನಿಯಮಿತವಾಗಿ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಜಿಲ್ಲಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ಗೌರವಧನ ನಿಗದಿಪಡಿಸಬೇಕು, ಮೂಲಭೂತ ಸಮಸ್ಯೆಗಳನ್ನು ಈಡೇರಿಸುವವರೆಗೆ ‘ಸಮಸ್ತ’ ಆ್ಯಪ್‌ನಲ್ಲಿ ಕೆಲಸ ಮಾಡಲು ಬಲವಂತ ಮಾಡುವುದನ್ನು ನಿಲ್ಲಿಸಬೇಕು ಹಾಗೂ ನಿಯಮಿತವಾಗಿ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಜಿಲ್ಲಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಆಶಾ ಕಾರ್ಯರ್ತೆಯರು, ಸಹಾಯಕಿಯರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ನಂತರ ಜಿಪಂ ಸಿಇಒ ಮುಖಾಂತರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯ ಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಬೇಕು. ಮೊಬೈಲ್ ಹಾಗೂ ಆ್ಯಪ್ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವವರೆಗೆ ಸಮಸ್ತ ಆ್ಯಪ್‌ನಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಬಾರದು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಮಾರ್ಗಸೂಚಿಗಳ ಪ್ರಕಾರ ನಿಕ್ಷಯ್ ಆ್ಯಪ್‌ನಲ್ಲಿ ಕೆಲಸ ಮಾಡುವುದು ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಯಲ್ಲ. ಆದ್ದರಿಂದ ಈ ಕೆಲಸ ಮಾಡುವಂತೆ ಒತ್ತಡ ಹೇರಕೂಡದು ಎಂದು ಮನವಿ ಮಾಡಿದರು.ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಎಲ್ಲ ಗೌರವಧನ ಹಾಗೂ ಪ್ರೋತ್ಸಾಹಧನಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲಾಖೆಯ ಆದೇಶ ದಂತೆ ಮಾಸಿಕ 5 ಸಾವಿರ ರು. ಗೌರವಧನ, 2 ಸಾವಿರ ರು. ಮಾಸಿಕ ಪ್ರೋತ್ಸಾಹಧನ ಹಾಗೂ 1 ಸಾವಿರ ರು. ಟಿಬಿಐ ಮೊತ್ತವನ್ನು ಯಾವುದೇ ಕಡಿತವಿಲ್ಲದೆ ಪೂರ್ಣವಾಗಿ ಪಾವತಿಸಬೇಕು. ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪಾವತಿ ವಿವರಗಳ ಕ್ಷೇಮ ಮತ್ತು ರಿಲೀಸ್ ಕಾಪಿಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ಪೂಟಂ ಮಾದರಿ ತರಲು ಒತ್ತಾಯಿಸಬಾರದು ಎಂಬ ಸುತ್ತೋಲೆಗಳಿದ್ದರೂ ತಳಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುತ್ತಿರುವುದನ್ನು ತಡೆಯ ಬೇಕು. ಪಾವತಿಸಲಾದ ಪ್ರೋತ್ಸಾಹಧನ ಯಾವ ತಿಂಗಳಿಗೆ ಸಂಬಂಧಿಸಿದೆ ಎಂಬುದನ್ನು ಪಾಸ್‌ಬುಕ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕಳೆದ ಒಂದು ವರ್ಷದಲ್ಲಿ ಪಾವತಿಸಿರುವ ಗೌರವಧನ ಹಾಗೂ ಎಂಸಿಟಿಎಸ್, ನಾನ್-ಎಂಸಿಟಿಎಸ್, ಟಿಬಿಐ ಸೇರಿದಂತೆ ವಿವಿಧ ಪ್ರೋತ್ಸಾಹಧನಗಳ ಸಂಪೂರ್ಣ ವಿವರಗಳ ಸಾಫ್ಟ್ ಕಾಪಿಯನ್ನು ಆಶಾ ಕಾರ್ಯಕರ್ತೆಯರ ಸಂಘಕ್ಕೆ ಒದಗಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದ ಅಥವಾ ನಿವೃತ್ತಿ ಹೊಂದಿದ ಆಶಾ ಕಾರ್ಯಕರ್ತೆಯರಿಗೆ ಇಡುಗಂಟು ಪಾವತಿಸಬೇಕು ಎಂದು ಸಂಘವು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವೀರೇಶ್ ಎನ್.ಎಸ್., ಜಿಲ್ಲಾ ಕಾರ್ಯದರ್ಶಿ ಮಹೇಶ್,ಉಪಾಧ್ಯಕ್ಷ ಅಣ್ಣಪ್ಪ ಶಿರಶ್ಯಾಡ್, ಆಶಾ ಕಾರ್ಯಕರ್ತರಾದ ಶೋಭಾ, ಗೌರಮ್ಮ, ಮಂಜುಳಾ, ಈರಮ್ಮ ನಾಗರತ್ನ ಮಲ್ಲಮ್ಮ, ಪ್ರಭಾವತಿ, ದೇವು ಮಸ್ಕಿ ಸೇರಿ ಅನೇಕರು ಇದ್ದರು.