ನಿಶ್ಚಿತ ಗೌರವಧನ ನೀಡಲು ಆಶಾ ಕಾರ್ಯಕರ್ತೆಯರ ಆಗ್ರಹ

| Published : Jan 01 2025, 12:00 AM IST

ಸಾರಾಂಶ

ಶಿವಮೊಗ್ಗ: ನಿಶ್ಚಿತ ಗೌರವಧನವು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗ: ನಿಶ್ಚಿತ ಗೌರವಧನವು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಹಗಲಿರುಳು ದುಡಿಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ಆಗ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಎಲ್ಲರು ಶ್ಲಾಘನೆ ಮಾಡಿದ್ದರು. ಆದರೆ ಈಗ ನಮ್ಮನ್ನು ಕೇಳುವವರೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದಾರೆ. ಮಾಡಿದ ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ, ಹಲವು ಬಾರಿ ಮನವಿ ಕೂಡ ಮಾಡಿದ್ದೇವೆ. ಈಗಿರುವ ಗೌರವ ಧನವನ್ನು 15 ಸಾವಿರಕ್ಕೆ ಹೆಚ್ಚಿಸಬೇಕು. 2 ಸಾವಿರ ರು. ಪ್ರೋತ್ಸಾಹ ಧನ ನೀಡಬೇಕು. ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಬಂಗಾಳದಲ್ಲಿ ಇರುವಂತೆ ನಿವೃತ್ತಿ ಆದವರಿಗೆ 5 ಲಕ್ಷ ರು. ನೀಡಬೇಕು. ಆರೋಗ್ಯ ಸೌಲಭ್ಯ ಒದಗಿಸಬೇಕು. ಉಚಿತ ಚಿಕಿತ್ಸೆ ನೀಡಬೇಕು. 2024ರ ಏಪ್ರಿಲ್‌ನಿಂದ ಆಶಾ ಸುಗಮಕಾರರಿಗೆ 7,500 ಗೌರವಧನ ನೀಡಿ ಹಲವಾರು ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ಸುಗಮಕಾರರಿಗೆ ಗೌರವಧನ ನೀಡಬೇಕು. ಪಿ.ಎಫ್, ಗ್ರ್ಯಾಚ್ಯುಟಿ, ಇಎಸ್‍ಐ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಪ್ರಮುಖರಾದ ಸರಸ್ವತಿ, ಚಂದ್ರಕಲಾ, ರೇಣುಕಾ, ಪೂರ್ಣಿಮಾ ಸೇರಿದಂತೆ ಹಲವರಿದ್ದರು.