ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶಿರಾ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ನಳಿನಾಕ್ಷಿ ಅವರು ಪ್ರಮುಖ ಸಾಮಾಜಿಕ ಸೇವಾ ಕ್ಷೇತ್ರಗಳಾದ ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರಕಾರದ ಇಲಾಖೆಗಳಲ್ಲಿ ಕೆಳಸ್ತರದ ಜನತೆಗೆ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಕಳೆದ ಹಲವಾರು ದಶಕಗಳಿಂದ ಅತ್ಯಂತ ನಿಕೃಷ್ಟ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸರಕಾರದ ಯೋಜನೆಗಳಲ್ಲಿ ಗೌರವಧನ, ಪ್ರೋತ್ಸಾಹಧನದ ಹೆಸರಿನಲ್ಲಿ ದೇಶದ ಲಕ್ಷಾಂತರ ಮಹಿಳಾ ಕಾರ್ಮಿಕರನ್ನು ಕಾರ್ಯಕರ್ತೆಯರೆಂದು ಸೇವೆ ಪಡೆದುಕೊಳ್ಳುತ್ತಾ, ಕಾರ್ಮಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ. ಕನಿಷ್ಟ ವೇತನ, ಸೇವಾ ಭದ್ರತೆ ಇಲ್ಲದೆ ಹಗಲಿರುಳು ಸೇವೆ ಸಲ್ಲಿಸುತ್ತಿದ್ದೇವೆ. ಸರಕಾರ ನಮ್ಮ ಸೇವೆಗೆ ತಕ್ಕ ಪ್ರತಿಫಲ ನೀಡುವುದಿರಲಿ, ದುಡಿದಷ್ಟು ವೇತನ ನೀಡದೇ ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿವೆ. ರಾಷ್ಟ್ರದ ತಳಮಟ್ಟದಲ್ಲಿ ಸದಾ ಸೇವೆಗೆ ಸಿದ್ಧರಿರುವ ಮಹಿಳಾ ಕಾರ್ಮಿಕರಿಗೆ ಕೇಂದ್ರ ಸರಕಾರ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಿ ಖಾಯಂ ಮಾಡಬೇಕು. ಹಾಗೆಯೇ ಕಳೆದ ೩ ತಿಂಗಳ ಹಿಂದೆ, ರಾಷ್ಟ್ರೀಯ ಆರೋಗ್ಯ ಮಿಷನ್ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ನಿರ್ಧರಿಸಿದೆ. ಸರಕಾರ ಈ ನಿಟ್ಟಿನಲ್ಲಿ ಮುಂದುವರಿಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಪ್ರೋತ್ಸಾಹ ದರದ ಹೆಚ್ಚಳದ ಆದೇಶವನ್ನು ಮಾಡಿ ಅಗತ್ಯ ಆರ್ಥಿಕ ಅನುದಾನವನ್ನು ನೀಡಬೇಕೆಂದು ಕರ್ನಾಟಕ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೂ ಮನವಿ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಅಂಜಿನಮ್ಮ, ನೇತ್ರಾವತಿ, ಭಾಗ್ಯಮ್ಮ, ನಿಂಗಮ್ಮ, ಗಂಗಮ್ಮ, ಸುಜಾತ, ಚಂದ್ರಕಲಾ, ಭಾಗ್ಯಮ್ಮ, ಕೆ.ಎಚ್.ಸುಜಾತ, ಕಮಲಮ್ಮ ಸೇರಿದಂತೆ ಹಲವರು ಹಾಜರಿದ್ದರು.