ಸಾರಾಂಶ
ಕಾರವಾರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ. ಧರಣಿ ಆರಂಭಿಸುವ ಪೂರ್ವದಲ್ಲಿ ನಗರದ ಮಿತ್ರ ಸಮಾಜ ಮೈದಾನದಿಂದ ಪ್ರತಿಭಟನಾ ಮೆರವಣೆಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಧರಣಿ ಆರಂಭಿಸಿದರು.
ಏಪ್ರಿಲ್ ನಿಂದ ಜಾರಿಗೆ ಬರುವಂತೆ ಕನಿಷ್ಠ ₹10,000 ಗೌರವಧನ ಮತ್ತು ಇತರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಆಶಾ ಕಾರ್ಯಕರ್ತೆಯರ ಬೇಡಿಕೆ ಪರಿಶೀಲಿಸಿ, ಏಪ್ರಿಲ್ 2025 ರಿಂದ ಮಾಸಿಕ ಕನಿಷ್ಠ ₹10 ಸಾವಿರ ಗೌರವಧನ ನೀಡುವ ಭರವಸೆ ನೀಡಿದ್ದರು. ಅಲ್ಲದೆ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ₹1000 ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಆದರೆ, ಈ ಭರವಸೆಗಳು ಈವರೆಗೂ ಆದೇಶ ರೂಪದಲ್ಲಿ ಜಾರಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರ ಕೊಳಚೆ ಪ್ರದೇಶಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲಸ ಮಾಡಿದರೂ ಆಶಾ ಸಾಫ್ಟ್ ಪೋರ್ಟಲ್ ನಲ್ಲಿ ನಮೂದಾದ ಕೆಲಸಕ್ಕೂ ಸರಿಯಾಗಿ ಹಣ ಲಬಿಸುತ್ತಿಲ್ಲ. ಅಲ್ಲದೆ ಕೊರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ನಿಗದಿತ ಪ್ರೋತ್ಸಾಹಧನ ಸಿಗದ ಪರಿಣಾಮ ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರು ದುಡಿದ ಹಣ ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಪ್ರತಿ ಕಾರ್ಯಕರ್ತೆಗೆ ₹5,000 ಮತ್ತು ಕೇಂದ್ರದಿಂದ ₹2,000 ನೀಡುವ ಪ್ರೋತ್ಸಾಹಧನ ಬರುತ್ತಿದೆ. ಆದರೆ ಕಳೆದ ಬಜೆಟ್ ನಲ್ಲಿ ₹ 1,000 ಹೆಚ್ಚಳ ಘೋಷಣೆಯಾಗಿದ್ದರೂ ಅದು ಕೆಲವೇ ಸದಸ್ಯರಿಗೆ ಮಾತ್ರ ಅನ್ವಯವಾಗಿದೆ. ಹೆರಿಗೆ, ಗರ್ಭಿಣಿಯರ ಆರೈಕೆ, ಲಸಿಕೆ ಸೇವೆಗಳಿಗೂ ಪ್ರೋತ್ಸಾಹಧನ ಸಿಗುತ್ತಿಲ್ಲ ಎನ್ನುವುದು ಪ್ರತಿಭಟನಾಕಾರರ ಆರೋಪವಾಗಿದೆ.
ಪ್ರಮುಖ ಬೇಡಿಕೆಗಳು:ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಸೇರಿಸಿ ಮಾಸಿಕ ಕನಿಷ್ಠ ₹10,000 ಗೌರವಧನವನ್ನು ಏಪ್ರಿಲ್ 2025 ರಿಂದ ಜಾರಿಗೆ ತರಬೇಕು. ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ ಆಶಾ ಕಾರ್ಯಕರ್ತೆಯರಿಗೂ ₹1000 ಗೌರವಧನ ಹೆಚ್ಚಳ ಮಾಡಬೇಕು. ಕೆಲಸದ ಮೌಲ್ಯಮಾಪನದ ಹೆಸರಿನಲ್ಲಿ ಆಶಾಗಳ ಜನಸಂಖ್ಯೆ ಮಿತಿ ಹೆಚ್ಚಿಸುವ ಅವೈಜ್ಞಾನಿಕ ನಿರ್ಧಾರ ಕೈಬಿಡಬೇಕು. ಸುಮಾರು 2000 ಆಶಾ ಸುಗಮಕಾರರನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿರುವ ಆದೇಶ ಹಿಂಪಡೆದು ಅವರನ್ನು ಮುಂದುವರೆಸಬೇಕು. ನಿವೃತ್ತಿ ಹೊಂದಿದ 60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ನೀಡಬೇಕು. ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ₹ 2000 ಹೆಚ್ಚುವರಿ ಗೌರವಧನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾದ ಪ್ರಸ್ತಾಪಿಸಲಾಗಿದೆ.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ, ಪದ್ಮಾ ಚಲವಾದಿ, ಶ್ವೇತಾ ಕಪಡ್ಲಿಕರ್, ನಿವೇದಿತಾ ಕೊಳಂಬಕರ್, ಮಹಾಲಕ್ಷ್ಮಿ ನಾಯ್ಕ, ಪ್ರಭಾಮಣಿ, ಶಾರದಾ ಗೌಡ, ರೇಣುಕಾ ಭಂಡಾರಿ, ಭಾರತಿ ಭಟ್ ಸೇರಿದಂತೆ ಐದು ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದ್ದರು.