೨ನೇ ದಿನವೂ ಮುಂದುವರಿದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

| Published : Aug 14 2025, 01:00 AM IST

ಸಾರಾಂಶ

ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ 2 ಸಾವಿರ ರು. ಗೌರವಧನ ಹೆಚ್ಚಿಸಬೇಕು.

ಕನ್ನಡಪ್ರಭ ವಾರ್ತೆ ಹಾಸನ

ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಆಶಾ ಕಾರ್ಯಕರ್ತೆಯರು ಹಗಲು- ರಾತ್ರಿ ಶ್ರಮಿಸುತ್ತಿದ್ದು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾವಿರಾರು ಜನ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ನೇತೃತ್ವದಲ್ಲಿ ಡೀಸಿ ಕಚೇರಿ ಮುಂದೆ ಬುಧವಾರ 2ನೇ ದಿನವೂ ಪ್ರತಿಭಟನಾ ಧರಣಿ ಮುಂದುವರಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ಹನುಮೇಶ್ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ಎರಡನೇ ದಿನವೂ ಪ್ರತಿಭಟನಾ ಧರಣಿ ಮುಂದುವರಿದಿದ್ದು, ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾಧರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ನಮ್ಮ ಸರ್ಕಾರಗಳು ಇವರ ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಯಲ್ಲಿರುವಂತೆ ಮಾಡಿವೆ ಎಂದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, ಕಳೆದ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಈ ವರ್ಷದ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಇದುವರೆಗೂ ಅದು ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದರು.

ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಒಂದು ಸಾವಿರ ರು. ಹೆಚ್ಚಿಸಿದಂತೆ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರು. ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ 10 ಸಾವಿರ ರು.ಗಳನ್ನು ಈ ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿ. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂದು ಒತ್ತಾಯಿಸಿದರು.

ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ 2 ಸಾವಿರ ರು. ಗೌರವಧನ ಹೆಚ್ಚಿಸಬೇಕು. 2025 ಜೂನ್- ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಮುಖಂಡರಾದ ಮಮತಾ, ಮೇಘನಾ, ನವೀನಾ, ಪುಷ್ಪಲತಾ, ಕೋಮಲ, ಗೀತಾ, ಲಲಿತಾ, ಮಂಜುಳಾ, , ಗೌರಮ್ಮ, ಲಕ್ಷ್ಮಿ, ಶಿವಮ್ಮ, ತಾಹೀರಾ, ಕುಮಾರಿ ಇತರರು ಉಪಸ್ಥಿತರಿದ್ದರು.