ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡಬೇಕು. ಪ್ರತಿತಿಂಗಳು ನಿಗದಿತ ಅವಧಿಯಲ್ಲಿ ಗೌರವಧನ ಹಾಗೂ ಪ್ರೋತ್ಸಾಹಧನ ಬಿಡುಗಡೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಕಳೆದ ಹಲವು ತಿಂಗಳುಗಳಿಂದ ಹಲವು ಜಿಲ್ಲೆಗಳ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಬಾಕಿ ಉಳಿದಿದೆ. ಕೆಲಸಕ್ಕೆ ಅನುಗುಣವಾಗಿ ಪ್ರತಿತಿಂಗಳು ಪೂರ್ಣ ಪ್ರಮಾಣದ ಪ್ರೋತ್ಸಾಹಧನ ದೊರೆಯದೇ ಇರುವುದರಿಂದ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನೀಡಿದ್ದ ವೇತನ ಹೆಚ್ಚಳದ ಭರವಸೆಗಳೂ ಈಡೇರದಿರುವುದು ನಿರಾಶಾದಾಯಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎಐಯುಟಿಯುಸಿ ನೇತೃತ್ವದಲ್ಲಿ ಸೋಮವಾರ ನಗರದ ಹೇಮಾವತಿ ಪ್ರತಿಮೆ ಎದುರು ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಕ್ಟೋಬರ್ ೫ರಿಂದ ೧೧ರವರೆಗೆ ರಾಜ್ಯಾದ್ಯಂತ ‘ಪ್ರತಿಭಟನಾ ಸಪ್ತಾಹ’ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಉಮಾದೇವಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ ೧,೫೦೦ರಷ್ಟು ಮಾತ್ರ ಗೌರವಧನ ಹೆಚ್ಚಳವಾಗಿದ್ದು, ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಗಳಿಗೆ ಅನುಗುಣವಾಗಿ ಗೌರವಧನ ಹೆಚ್ಚಳವಾಗಿಲ್ಲ. ದುಬಾರಿ ಜೀವನ ನಿರ್ವಹಣೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ. ರಾಜ್ಯ ಸರ್ಕಾರದ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಒಟ್ಟುಗೂಡಿಸಿ ಕನಿಷ್ಠ ೧೫ ಸಾವಿರ ನಿಗದಿಪಡಿಸಬೇಕು. ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡಬೇಕು. ಪ್ರತಿತಿಂಗಳು ನಿಗದಿತ ಅವಧಿಯಲ್ಲಿ ಗೌರವಧನ ಹಾಗೂ ಪ್ರೋತ್ಸಾಹಧನ ಬಿಡುಗಡೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಕಳೆದ ಹಲವು ತಿಂಗಳುಗಳಿಂದ ಹಲವು ಜಿಲ್ಲೆಗಳ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಬಾಕಿ ಉಳಿದಿದೆ. ಕೆಲಸಕ್ಕೆ ಅನುಗುಣವಾಗಿ ಪ್ರತಿತಿಂಗಳು ಪೂರ್ಣ ಪ್ರಮಾಣದ ಪ್ರೋತ್ಸಾಹಧನ ದೊರೆಯದೇ ಇರುವುದರಿಂದ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನೀಡಿದ್ದ ವೇತನ ಹೆಚ್ಚಳದ ಭರವಸೆಗಳೂ ಈಡೇರದಿರುವುದು ನಿರಾಶಾದಾಯಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಸೌಲಭ್ಯ ಕಲ್ಪಿಸದೆ, ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಗಳನ್ನು ಪರಿಹರಿಸದೆ ‘ಸಮಸ್ತ’ ಸೇರಿದಂತೆ ವಿವಿಧ ಮೊಬೈಲ್ ಆಪ್‌ಗಳ ಮೂಲಕ ಕೆಲಸ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಆಶಾ ಕಾರ್ಯಕರ್ತೆಯರು ತಂತ್ರಜ್ಞಾನ ವಿರೋಧಿಗಳಲ್ಲ. ಆದರೆ ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಆ?ಯಪ್ ಆಧಾರಿತ ಕೆಲಸಕ್ಕೆ ಒತ್ತಾಯಿಸುವುದು ಎಷ್ಟು ನ್ಯಾಯಸಮ್ಮತ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಡಿಜಿಟಲ್ ದಾಖಲಾತಿ ಜತೆಗೆ ಭೌತಿಕ ದಾಖಲೆಗಳನ್ನೂ ನಿರ್ವಹಿಸಬೇಕಾಗಿರುವುದರಿಂದ, ಆರೋಗ್ಯ ಸೇವೆ ನೀಡುವುದಕ್ಕಿಂತ ದಾಖಲಾತಿ ನಿರ್ವಹಣೆಯಲ್ಲೇ ಹೆಚ್ಚಿನ ಸಮಯ ವ್ಯಯವಾಗುತ್ತಿದೆ ಎಂದು ಹೇಳಿದರು. ಡಿಜಿಟಲ್ ವ್ಯವಸ್ಥೆ ಅನಿವಾರ್ಯವಾಗಿದ್ದರೆ ಕಾರ್ಯಕರ್ತೆಯರಿಗೆ ಅಗತ್ಯ ಮೊಬೈಲ್ ಸೌಲಭ್ಯ, ತಾಂತ್ರಿಕ ನೆರವು ಹಾಗೂ ಸರ್ವರ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರವಾಗಿ ಉಪ ಕಾರ್ಯದರ್ಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯುವರಾಜ್ ಹಾಗೂ ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಮನವಿಯನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಅಲ್ಲದೆ, ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ಕರೆಯುವುದಾಗಿ ತಿಳಿಸಿದರು. ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘಟನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.

ಪ್ರತಿಭಟನೆಯ ನೇತೃತ್ವವನ್ನು ಎಐಯುಟಿಯುಸಿ ಜಿಲ್ಲಾ ಮುಖಂಡ ಜಿ. ಹನುಮೇಶ್ ವಹಿಸಿದ್ದರು. ಆಶಾ ಕಾರ್ಯಕರ್ತೆಯರಾದ ಮಮತಾ, ಪುಷ್ಪಲತಾ, ಶಿವಮ್ಮ, ಗೌರಮ್ಮ, ಮಂಜುಳ, ತಾಹಿರ, ಗೀತಾ, ನವೀನ, ಯಶೋಧಮ್ಮ, ಕುಮಾರಿ, ಲಕ್ಷ್ಮೀ ಸೇರಿದಂತೆ ಇತರರು ಪಾಲ್ಗೊಂಡಿದ್ದರು.