ಸುರಿಯುವ ಮಳೆಯಲ್ಲೇ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

| Published : Aug 13 2025, 12:30 AM IST

ಸುರಿಯುವ ಮಳೆಯಲ್ಲೇ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗೆ ಆಗ್ರಹಿಸಿ ಹೋರಾಟ ನಡೆಸಿದರು.

ಗದಗ: ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗೆ ಆಗ್ರಹಿಸಿ ಹೋರಾಟ ನಡೆಸಿದರು.

ಗದಗ ನಗರದ ಗಾಂಧಿ ವೃತ್ತದಲ್ಲಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದ್ದು, 10 ಸಾವಿರ ಪ್ರೋತ್ಸಾಹ ಧನ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಶಾಮಿಯಾನ ಹಾಕಲು ಪೊಲೀಸರು ಅವಕಾಶ ನೀಡಿಲ್ಲ ಅಂತ ಆಕ್ರೋಶವನ್ನು ಕೂಡ ಹೊರ ಹಾಕಿದ್ದಾರೆ. ಶಾಮಿಯಾನಕ್ಕೆ ಅವಕಾಶ ನೀಡಿದ್ದರೇ ಮಳೆಯಲ್ಲಿ ನೆನೆಯುವ ಅವಶ್ಯಕತೆ ಇರಲಿಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.ಆಶಾ ಕಾರ್ಯಕರ್ತೆಯರಿಗೆ ಮೊದಲು ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ತರಬೇತಿ ನಂತರವೂ ವಿದ್ಯಾರ್ಹತೆ ಎಂಬ ಮಾನದಂಡ ಹೇರಿ ಕೆಲಸದಿಂದ ವಜಾಗೊಳಿಸುವ ಹುನ್ನಾರ ನಡೆದಿದೆ. ಯಾವುದೇ ಆಶಾ ಕಾರ್ಯಕರ್ತೆಯರನ್ನು ತೆಗೆದು ಹಾಕಬಾರದು. ಪ್ರತಿ ತಿಂಗಳ ಪ್ರೋತ್ಸಾಹಧನವನ್ನು 10 ಸಾವಿರಕ್ಕೆ ಹೆಚ್ಚಿಸಬೇಕು. ಸಮಾಜದಲ್ಲಿ 24/7 ಕೆಲಸ ಮಾಡುವ ಕಾರ್ಯಕರ್ತೆಯರು ಮಳೆಯಲ್ಲೇ ನೆನೆಯುತ್ತಿರುವ ದೃಶ್ಯ ಮನ ಕಲಕುವಂತಿತ್ತು.ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಸುರೇಶ್ ಜಿ ಅವರು, ಆಶಾ ಕಾರ್ಯಕರ್ತೆಯರು 17 ವರ್ಷಗಳಿಂದ ತಳ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ ಸೇವೆಯನ್ನು ಗ್ರಾಮಿಣ ಭಾಗದಲ್ಲಿ ಮಾಡುತ್ತಿದ್ದಾರೆ. ಶಿಶು ಮರಣ, ತಾಯಿ ಮರಣ ತಪ್ಪಿಸಲು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಆಶಾ ಕಾರ್ಯಕರ್ತೆಯರ ಹಗಲು-ರಾತ್ರಿ ಸೇವೆಯಿಂದ ಶಿಶು ಮರಣ, ತಾಯಿ ಮರಣದ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಿದೆ ಅಂತ ಹೇಳಿದರು.ಕೊರೋನಾ ಸಮಯದಲ್ಲಿ ಮೊದಲ ಸಾಲಿನ ಯೋಧರಾಗಿ ಕೆಲಸ ಮಾಡಿದ್ದಾರೆ. ಮನೆ-ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಇಂತಹ ಆಶಾ ಕಾರ್ಯಕರ್ತೆಯರ ಗೋಳನ್ನು ಯಾವ ಸರ್ಕಾರ ಕೇಳುತ್ತಿಲ್ಲ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಅಧಿಕಾರ ನಡೆಸಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ನಮ್ಮ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು. ಈಗ ಕೇವಲ 5000 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. 15,000 ಪ್ರೋತ್ಸಾಹಧನ ನೀಡುವಂತೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಮಾಡಿದೇವು. ರು. 10,000 ನೀಡುವುದಾಗಿ ಸಿಎಂ ಭರವಸೆ ನೀಡಿದರು. ಆದರೆ, ಅದು ಭರವಸೆಯಾಗಿ ಉಳಿದಿದೆ ವಿನಃ ಆದೇಶ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿ ನಮ್ಮನ್ನು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಸದ್ಯ ಸೇವೆ ಮಾಡುತ್ತಿರುವ ಕಾರ್ಯಕರ್ತೆಯರನ್ನು ಕೆಲಸದಿಂದ ತಗೆಯುವ ಹುನ್ನಾರ ನಡೆದಿದೆ ಅಂತ ಗಂಭೀರವಾಗಿ ಆರೋಪಿಸಿದರು.ಆಶಾ ಕಾರ್ಯಕರ್ತೆಯರಿಗೆ ವಿವಿಧ ಹೆಸರಲ್ಲಿ ಶೋಷಣೆ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು 17 ವರ್ಷದಿಂದ ತರಬೇತಿ ಪಡೆದು ನೂರಿತ ತಜ್ಞರಂತೆ ಕೆಲಸ ಮಾಡುತ್ತಿದ್ದಾರೆ. ಮೌಲ್ಯಮಾಪನ, ಶಿಕ್ಷಣದ ಹೆಸರಿನಲ್ಲಿ ಕಾರ್ಯಕರ್ತೆಯರನ್ನು ಕೈಬಿಡುವ ಕೆಲಸ ಮಾಡಲಾಗುತ್ತಿದೆ. 60 ವರ್ಷ ಆದವರನ್ನು ಏಕಾಏಕಿ ಕೆಲಸದಿಂದ ಕೈ ಬಿಡಲಾಗಿದೆ. ಕೈ ಬಿಡುವ ಮುನ್ನ ಹಿಡಿಗಂಟು ನೀಡಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಭಾಗ್ಯಜ್ಯೋತಿ, ಲಕ್ಷ್ಮೀ ಪೂಜಾರ, ಗೌರಮ್ಮ ಕಟ್ಟಿಮನಿ, ಪ್ರೇಮಾ ಪಾಟೀಲ, ರಮಿಜಾ ಹಾವೇರಿ, ಸುಮಂಗಲಾ ತಳವಾರ, ಮಂಜುಳಾ ಹೊಸೂರ, ಅನ್ನಪೂರ್ಣ ಖಾಟವಾ, ಗೀತಾ ಭಜಂತ್ರಿ, ಶಾಹಿನ್ ಅಲ್ಮಾಸ್ ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತೆಯರು ಭಾಗವಹಿಸಿದ್ದರು.