ಬಳ್ಳಾರಿಯಲ್ಲಿ ಆಶಾದೀಪ ಯೋಜನೆ ಆರಂಭ: ಲಾಡ್‌

| Published : Jul 06 2025, 01:48 AM IST

ಸಾರಾಂಶ

ದೇಶದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಆಶಾ ದೀಪ ಯೋಜನೆ ಆರಂಭಿಸಲಾಗಿದೆ.

ದೇಶದಲ್ಲೇ ಪ್ರಥಮ ಬಾರಿಗೆ । ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ ಕಾರ್ಮಿಕ ಸಚಿವಕನ್ನಡಪ್ರಭ ವಾರ್ತೆ ಬಳ್ಳಾರಿ

ದೇಶದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಆಶಾ ದೀಪ ಯೋಜನೆ ಆರಂಭಿಸಲಾಗಿದ್ದು, ಇದರಲ್ಲಿ ಯಾವುದೇ ಉದ್ದಿಮೆದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಅಥವಾ ಅಪ್ರೆಂಟಿಸ್ ತರಬೇತಿ ನೀಡಿದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ 2 ವರ್ಷದವರೆಗೆ ತಿಂಗಳ ₹7 ಸಾವಿರದಂತೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಡಿ ಉದ್ಯಮಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ಲಾಡ್ ತಿಳಿಸಿದರು.

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಡಿಯಂ ರಸ್ತೆಯ ವಾಲ್ಮೀಕಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸಂಘಟಿತ ವಿವಿಧ ವಲಯಗಳಡಿ ದುಡಿಯುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸುರಕ್ಷತೆ ಮತ್ತು ವಿಶೇಷ ಸಾಮಾಜಿಕ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಧ್ಯೇಯೋದ್ದೇಶವಾಗಿದ್ದು ಕಾರ್ಮಿಕ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ದುಡಿವ ವರ್ಗದ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ದೇಶದಲ್ಲಿ ಸುಮಾರು ಶೇ.90ರಷ್ಟು ಕಾರ್ಮಿಕರು ಅಸಂಘಟಿತ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಶೇ.85ರಷ್ಟು ಕಾರ್ಮಿಕರು ಇದ್ದಾರೆ. ದೇಶದ ಶೇ.50ರಷ್ಟು ಜಿಡಿಪಿಯು ಅಸಂಘಟಿತ ವಲಯಗಳ ಕಾರ್ಮಿಕರ ಆದಾಯದಿಂದ ಬರುತ್ತದೆ. ಹಾಗಾಗಿ ಅವರ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ರೂಪಿಸಿ ಅಧಿನಿಯಮ ಜಾರಿಗೊಳಿಸಿ 20 ವರ್ಗಗಳನ್ನು ಗುರುತಿಸಿ ಸೌಲಭ್ಯ ನೀಡಲಾಗಿದೆ. ಈ ಹಿನ್ನೆಲೆ ಯೋಜನೆಯಡಿ ಅಪಘಾತದಿಂದ ಫಲಾನುಭವಿ ನಿಧನರಾದರೆ ₹5 ಲಕ್ಷ ಪರಿಹಾರ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನವನ್ನು ಸೊಸೈಟಿ ರಚಿಸಿ ಜಿಲ್ಲಾಧಿಕಾರಿಗಳ ಮೂಲಕ ಪಾವತಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಬಡವರು ಮತ್ತು ಶೋಷಿತ ವರ್ಗದವರ ಪರ ಕಾಳಜಿ ಹೊಂದಿರುವ ನಮ್ಮ ಸರ್ಕಾರ ರಾಜ್ಯದ ಅಸಂಘಟಿತ ಕಾರ್ಮಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ರೂಪಿಸಲಾಗಿದೆ. ಬೈಪಾಸ್ ರಸ್ತೆ ಕಾಮಗಾರಿ, ರೈಲ್ವೆ ಸೇತುವೆ ನಿರ್ಮಾಣ ಕಾರ್ಯಗಳನ್ನು ಪುನರ್ ಆರಂಭಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ರಿಂಗ್ ರೋಡ್ ಮಾಡುವ ಯೋಜನೆಯೂ ರೂಪಿಸಲಾಗಿದೆ ಎಂದು ಸಂಸದ ಈ. ತುಕಾರಾಂ ತಿಳಿಸಿದರು.

ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಹಾಗೂ ಸಂಡೂರು ಶಾಸಕಿ ಈ.ಅನ್ನಪೂರ್ಣ ಮಾತನಾಡಿದರು.

ಸಾಂಕೇತಿಕವಾಗಿ ವಿವಿಧ ವರ್ಗಗಳಡಿ ನೋಂದಾಯಿಸಿಕೊಂಡಿದ್ದ ಕಾರ್ಮಿಕರಿಗೆ ಸಚಿವ ಸಂತೋಷ್‌ ಲಾಡ್ ಸ್ಮಾರ್ಟ್ ಕಾರ್ಡ್ ವಿತರಿಸಿದರು. ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ, ಲಿಡ್ಕರ್ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಮುಲ್ಲಂಗಿ ನಂದೀಶ್, ಬುಡಾ ಅಧ್ಯಕ್ಷ ಆಂಜನೇಯಲು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಎಸ್ಪಿ ಡಾ. ಶೋಭಾರಾಣಿ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು, ಕಾರ್ಮಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.