ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀಚೆಲುವನಾರಾಯಣಸ್ವಾಮಿಗೆ ಜುಲೈ 29ರಿಂದ ಆಷಾಢ ಮಾಸದ ಧಾರ್ಮಿಕ ಪೂಜೆಗಳು ಆರಂಭವಾಗಲಿವೆ. ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಆಗಸ್ಟ್ 3ರ ರಾತ್ರಿ 7 ಗಂಟೆಗೆ ಅದ್ಧೂರಿಯಾಗಿ ನಡೆಯಲಿದೆ.ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಶ್ರದ್ಧಾಭಕ್ತಿಯಿಂದ ಆಷಾಢ ಮಾಸದಲ್ಲಿ ಆರಂಭಿಸಿರುವ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಜುಲೈ 29ರಿಂದ ಆರಂಭವಾಗಿ ಆಗಸ್ಟ್ 9ರವರೆಗೆ ನಡೆಯಲಿದೆ.
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷಕ್ಕೆರಡು ಸಲ ಮಾತ್ರ ಸ್ವಾಮಿಗೆ ಕಲ್ಯಾಣೋತ್ಸವ ಹಾಗೂ ಮಹಾಭಿಷೇಕ ನಡೆಯುವ ಸಂಪ್ರದಾಯವಿದ್ದು, ವೈರಮುಡಿ ಬ್ರಹ್ಮೋತ್ಸವ ಬಿಟ್ಟರೆ ಮೈಸೂರು ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದಂದು ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುತ್ತದೆ.ಈ ವರ್ಷ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮನಕ್ಷತ್ರದ ಅಂಗವಾಗಿ ಆಷಾಢ ಮಾಸದ ಉತ್ತರಾಷಾಡ ದ್ವಿತೀಯೆಯಂದು ಜುಲೈ 31 ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಹಾಗೂ ಸಂಜೆ ಕಲ್ಯಾಣೋತ್ಸವ ನಡೆಯಲಿದೆ. ಬೆಳಗ್ಗೆ ಗರುಡದ್ವಜಾರೋಹಣ ನಡೆಯಲಿದೆ.
ಆಗಸ್ಟ್ 3ರ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಾಲ್ಕನೇ ದಿನ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆ ಮಾಡಿ ಶ್ರೀದೇವಿ-ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಧರಿಸಿ ನಾಲ್ಕು ಬೀದಿಗಳಲ್ಲಿ ಉತ್ಸವ ನೆರವೇರಿಸಲಾಗುತ್ತದೆ.
ಕೃಷ್ಣರಾಜಮುಡಿ ಕಿರೀಟ ಆ.30 ರಿಂದ ಆಗಸ್ಟ್ 8ರವರೆಗೆ ವಿವಿಧಉತ್ಸವಗಳಲ್ಲಿ ಚೆಲುವನಾರಾಯಣನನ್ನು ಅಲಂಕರಿಸಲಿದೆ. ಆ. 8ರಂದು ಕಲ್ಯಾಣಿಯಲ್ಲಿ ನಡೆಯುವ ತೀರ್ಥಸ್ನಾನದೊಂದಿಗೆ ಬ್ರಹ್ಮೋತ್ಸವ ಸಂಪನ್ನವಾಗಲಿದೆ.
ಉತ್ಸವ ಬೀದಿಗಳಿಗೆ ದೀಪಾಲಂಕಾರ:ಮಹಾರಾಜರ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ವೇಳೆ ಉತ್ಸವ ಬೀದಿಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯ ವಕೀಲ ಕಾಡೇನಹಳ್ಳಿ ಸತೀಶ್ ಮಾಹಿತಿ ನೀಡಿದ್ದಾರೆ. ಜುಲೈ 29 ರಿಂದ ಆಗಸ್ಟ್ 9ರವರೆಗೆ ದೇವಾಲಯದ ರಾಜಗೋಪುರಕ್ಕೆ ದೀಪಾಲಂಕಾರ, ರಾಜಬೀದಿಗೆ ದೀಪಗಳ ತೋರಣ ಅಳವಡಿಸಲಾಗುತ್ತದೆ.
ಮಹಾರಾಜರ ಜನ್ಮ ನಕ್ಷತ್ರದಂದು ಜುಲೈ 31 ರಂಜೆ ಮುಮ್ಮುಡಿ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತವಿಗ್ರಹಕ್ಕೆ ವಿಶೇಷ ಪುಷ್ಪಹಾರ ಹಾಕಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಅರ್ಪಿಸಲಾಗುತ್ತದೆ. ಬ್ರಹ್ಮೋತ್ಸವಗಳ ವೇಳೆ ನಡೆಯುವ ಪ್ರಮುಖ ಉತ್ಸವಗಳಿಗೆ ವಿಶೇಷ ಮಂಗಳವಾದ್ಯ ನಿಯೋಜಿಸಿ ಕೃಷ್ಣರಾಜಮುಡಿ ಬ್ರಹ್ಮೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆಭಕ್ತರಿಗೂ ಸೇವೆಗೆ ಅವಕಾಶ:
ಆಷಾಢ ಜಾತ್ರಾಮಹೋತ್ಸವ ಕೃಷ್ಣರಾಜಮುಡಿ ಬ್ರಹ್ಮೋತ್ಸವದಲ್ಲಿ ಪುಷ್ಪಾಲಂಕಾರ, ಪುಷ್ಪಕೈಂಕರ್ಯ ಸೇರಿ ಹಲವು ಸೇವೆಗಳನ್ನು ಭಕ್ತರು ನೆರವೇರಿಸಬಹುದು ಎಂದು ಇಒ ಶೀಲಾ ಹೇಳಿದ್ದಾರೆ.ಕಲ್ಯಾಣೋತ್ಸವ ಮತ್ತು ಮಹಾಭಿಷೇಕದಂದು ಚೆಲುವನಾರಾಯಣಸ್ವಾಮಿ ಸನ್ನಿಧಿ ಆವರಣ ಕಲ್ಯಾಣೋತ್ಸವ ನಡೆಯುವ ಅಮ್ಮನವರ ಸನ್ನಿಧಿ ಪ್ರಾಂಗಣಕ್ಕೆ ಪುಷ್ಪಾಲಂಕಾರ ಸೇವೆ ಮಾಡಬಹುದು. ಬ್ರಹ್ಮೋತ್ಸವದಲ್ಲಿ ನಡೆಯುವ ವಾಹನೋತ್ಸವಗಳ ಸೇವೆ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಿ ಹಲವು ಸೇವೆಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.