ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಎಷ್ಟು ಯೋಜನೆಗಳಿಗೆ ಇಟ್ಟಿದೆ, ಹಾಗೆಯೇ ಇಂದಿರಾ ಗಾಂಧಿ ಕುಟುಂಬದವರ ಹೆಸರುಗಳನ್ನು ಎಷ್ಟು ಯೋಜನೆಗಳಿಗೆ ಇಡಲಾಗಿದೆ ಎನ್ನುವ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಅವರ ನಡುವೆ ಪಟ್ಟಿ ಸಮೇತ ಜಟಾಪಟಿ ನಡೆಯಿತು.
ಕನ್ನಡಪ್ರಭ ವಾರ್ತೆ, ವಿಧಾನಸಭೆ
ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಎಷ್ಟು ಯೋಜನೆಗಳಿಗೆ ಇಟ್ಟಿದೆ, ಹಾಗೆಯೇ ಇಂದಿರಾ ಗಾಂಧಿ ಕುಟುಂಬದವರ ಹೆಸರುಗಳನ್ನು ಎಷ್ಟು ಯೋಜನೆಗಳಿಗೆ ಇಡಲಾಗಿದೆ ಎನ್ನುವ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಅವರ ನಡುವೆ ಪಟ್ಟಿ ಸಮೇತ ಜಟಾಪಟಿ ನಡೆಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅಶೋಕ್, ಮನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರು ತೆಗೆದುಹಾಕಿದ್ದೇಕೆ ಎಂದು ಪ್ರಶ್ನಿಸುವ ಕಾಂಗ್ರೆಸ್‌ನವರು ತಮ್ಮ ಅಧಿಕಾರಾವಧಿಯಲ್ಲಿ ಗಾಂಧೀಜಿ ಅವರಿಗಿಂತ ಇಂದಿರಾ ಗಾಂಧಿ ಕುಟುಂಬದವರ ಹೆಸರಲ್ಲೇ ಹೆಚ್ಚು ಯೋಜನೆಗಳಿಗೆ ನಾಮಕರಣ ಮಾಡಿದ್ದಾರೆ ಎಂದು ತಾವು ಸಿದ್ಧಪಡಿಸಿಕೊಂಡು ಬಂದಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಅವರ ಕುಟುಂಬದವರ ಹೆಸರಲ್ಲಿರುವ 454 ಯೋಜನೆಗಳ ಸುದೀರ್ಘ ಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿ ಒಂದಷ್ಟು ಯೋಜನೆಗಳನ್ನು ಓದಿದರು. ಕಾಂಗ್ರೆಸ್‌ನವರು ಯಾರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದು ಜನರೇ ತೀರ್ಮಾನ ಮಾಡಲಿ ಎಂದರು.ಇದಕ್ಕೆ, ಆಡಳಿತ ಪಕ್ಷದ ಶರತ್ ಬಚ್ಚೇಗೌಡ ಮತ್ತು ಪ್ರದೀಪ್ ಈಶ್ವರ್, ಕಾಂಗ್ರೆಸ್ ಸಾಧನೆಗಳ ಪಟ್ಟಿ ನೀಡಿದ್ದಕ್ಕೆ ಅಶೋಕ್ ಅವರಿಗೆ ಅಭಿನಂದನೆಗಳು ಎಂದು ಕಿಚಾಯಿಸಿದರು. ಈ ವೇಳೆ, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, ಮಹಾತ್ಮ ಗಾಂಧೀಜಿ ಹೆಸರಲ್ಲೂ ಕಾಂಗ್ರೆಸ್ ಸಾಕಷ್ಟು ಯೋಜನೆಗಳನ್ನು ತಂದಿದೆ ಎಂದು ಮೊಬೈಲ್‌ನಲ್ಲೇ ಗಾಂಧೀಜಿ ಅವರ ಹೆಸರಿನಲ್ಲಿರುವ ಕೆಲವು ಯೋಜನೆಗಳನ್ನು ಓದಿದರು. ಗಾಂಧೀಜಿ ಹೆಸರಲ್ಲಿ ಇನ್ನೂ ಸಾಕಷ್ಟು ಯೋಜನೆಗಳಿವೆ, ಡೌನ್‌ಲೋಡ್ ಆಗುತ್ತಿಲ್ಲ. ಸ್ಪೀಕರ್ ಸಮಯ ಕೊಟ್ಟರೆ ನಾನೂ ಪಟ್ಟಿ ಸಿದ್ಧಪಡಿಸಿಕೊಂಡು ಬರುತ್ತೇನೆ ಎಂದರು. ಆದರೆ, ಸ್ಪೀಕರ್ ಒಪ್ಪಲಿಲ್ಲ. ಈ ಮಧ್ಯೆ, ಬಿಜೆಪಿಯ ಸುರೇಶ್ ಕುಮಾರ್, ಬೆಂಗಳೂರು ಸೆಂಟ್ರಲ್ ಪಾಲಿಕೆಯ ಗಾಂಧಿನಗರ ವಾರ್ಡ್ ಅನ್ನೇ ನೆಹರೂ ನಗರ ಎಂದು ಬದಲಿಸಿದ್ದಾರೆ ಎಂದು ಕುಟುಕಿದರು. ಕಲಾವಿದೆ ಜಯಶ್ರೀಗೆ ಅಪಮಾನ; ಅಧಿಕಾರಿಗಳ ಅಮಾನತಿಗೆ ಆಗ್ರಹ:
ಕಲಾವಿದೆ ಬಿ.ಜಯಶ್ರೀ ಅವರು 5 ಗುಂಟೆ ಭೂಮಿ ದಾನ ಮಾಡಲು ಮೂರು ಬಾರಿ ಅರ್ಜಿ ನೀಡಿದ್ದರೂ, ಕಂದಾಯ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಸ್ಪಂದಿಸದೆ ಅಪಮಾನ ಮಾಡಿದ್ದಾರೆ. ಆ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಇದೇ ವೇಳೆ ಆರ್.ಅಶೋಕ್ ಆಗ್ರಹಿಸಿದರು.ಜಯಶ್ರೀ ಅವರನ್ನು ತಮ್ಮ ಕಚೇರಿಗೆ ಬರುವಂತೆ ಹೇಳಿದ ಎಡಿಎಲ್‌ಆರ್, ಅವರು ಹೋದಾಗ ಮೇಲಧಿಕಾರಿಗಳಿಂದ ಕರೆ ಬಂದಿದೆ ಎಂದು ನಿಮ್ಮ ಕೆಲಸಕ್ಕಿಂತ ಮೇಲಧಿಕಾರಿಯ ಕೆಲಸವೇ ಮುಖ್ಯ ಎಂದು ಹೊರಟು ಹೋಗಿದ್ದಾರೆ. ಅಧಿಕಾರಿ ಉಡಾಫೆಯಿಂದ ಮಾತಾಡುತ್ತಾರೆ ಎಂದು ಜಯಶ್ರೀ ಬೇಸರದಿಂದ ಹೇಳಿದ್ದಾರೆ. ದಾನ ಮಾಡುವ ಭೂಮಿಗೆ ಲಂಚ ಪಡೆಯಲು ಅವರನ್ನು ಅಲೆಸುತ್ತಿದ್ದಾರೆ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಆ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕಿತ್ತು. ಮನೆ ಬಾಗಿಲಿಗೆ ಸರ್ಕಾರ ಎಂದು ಪ್ರಚಾರ ಮಾಡಿದರೂ ಕಲಾವಿದೆಯನ್ನು ಕಚೇರಿಗೆ ಕರೆಸಿದ್ದಾರೆ. ಇಂತಹ ಕಳ್ಳ ಅಧಿಕಾರಿಯ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.