ವಿಟ್ಲ ಪಟ್ಟಣದ ಪ್ರಮುಖ ನಾಲ್ಕು ರಸ್ತೆಗಳನ್ನು ಅಗಲೀಕರಣಗೊಳಿಸುವ ಸಂಬಂಧ ವರ್ತಕರು, ಕಟ್ಟಡ ಮಾಲೀಕರು ಹಾಗೂ ಸಾರ್ವಜನಿಕರೊಂದಿಗೆ ಶಾಸಕ ಅಶೋಕ್ ಕುಮಾರ್ ರೈ ಶನಿವಾರ ವಿಟ್ಲ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಸಭೆ ನಡೆಸಿ ಸಾಧಕ-ಬಾಧಕಗಳ ಕುರಿತು ಚರ್ಚಿಸಿದರು.
ಬಂಟ್ವಾಳ: ವಿಟ್ಲ ಪಟ್ಟಣದ ಪ್ರಮುಖ ನಾಲ್ಕು ರಸ್ತೆಗಳನ್ನು ಅಗಲೀಕರಣಗೊಳಿಸುವ ಸಂಬಂಧ ವರ್ತಕರು, ಕಟ್ಟಡ ಮಾಲೀಕರು ಹಾಗೂ ಸಾರ್ವಜನಿಕರೊಂದಿಗೆ ಶಾಸಕ ಅಶೋಕ್ ಕುಮಾರ್ ರೈ ಶನಿವಾರ ವಿಟ್ಲ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಸಭೆ ನಡೆಸಿ ಸಾಧಕ-ಬಾಧಕಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು, ಕಬಕ-ವಿಟ್ಲ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿಪಡಿಸಲು ಈಗಾಗಲೇ ₹30 ಕೋಟಿ ಮಂಜೂರಾಗಿದ್ದು, ಇನ್ನೂ ₹10 ಕೋಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎರಡು ಸೇತುವೆ ಸೇರಿದಂತೆ ಸುಮಾರು 7.5 ಕಿ.ಮೀ. ರಸ್ತೆ ಅಭಿವೃದ್ಧಿಯಾಗಲಿದ್ದು, ಬೆಳೆಯುತ್ತಿರುವ ವಿಟ್ಲ ಪಟ್ಟಣಕ್ಕೆ ರಸ್ತೆ ಅಗಲೀಕರಣ ಅನಿವಾರ್ಯ ಎಂದು ಹೇಳಿದರು.ಎಲ್ಲರ ಅಭಿಪ್ರಾಯ ಪಡೆದು, ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರಿಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ರಸ್ತೆಗೆ ಜಾಗ ಬಿಟ್ಟುಕೊಡುವವರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ನೀಡಲಾಗುವುದು. ಸರ್ವೆ ನಡೆಸಿದ ಬಳಿಕ ಜಾಗ ಹಾಗೂ ಕಟ್ಟಡಗಳಿಗೆ ನ್ಯಾಯಯುತ ಪರಿಹಾರ ನೀಡಲಾಗುವುದು. ಆದರೆ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದು ತಿಳಿಸಿದರು.ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೊಪ್ಪಳ ಮಾತನಾಡಿ, ಈಗಾಗಲೇ ಹಿಂದೆ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟಿದ್ದೇವೆ. ಮತ್ತೆ ಜಾಗ ಕಳೆದುಕೊಂಡರೆ ವ್ಯಾಪಾರಕ್ಕೆ ತೀವ್ರ ಹೊಡೆತ ಬೀಳಲಿದೆ. ಬೈಪಾಸ್ ರಸ್ತೆ ನಿರ್ಮಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಾರಿ ಯಾರಿಂದಲೂ ಉಚಿತವಾಗಿ ಜಾಗ ಪಡೆಯುವುದಿಲ್ಲ. ಜಾಗ ಹಾಗೂ ಕಟ್ಟಡಗಳಿಗೆ ನ್ಯಾಯಯುತ ಪರಿಹಾರ ನೀಡಲಾಗುವುದು ಎಂದರು.ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ಗೌಡ ನಾಯ್ತೋಟು ಮಾತನಾಡಿ, ಅಂಗಡಿ ಮಾಲೀಕರು ಹಾಗೂ ವರ್ತಕರ ಅಭಿಪ್ರಾಯವನ್ನು ಗೌರವಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಪ.ಪಂ. ಉಪಾಧ್ಯಕ್ಷೆ ಸಂಗೀತ ಪಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್, ಮುಖ್ಯಾಧಿಕಾರಿ ಕರುಣಾಕರ ವಿ., ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ಜಾಗದ ಮಾಲೀಕರು ಹಾಗೂ ಸಾರ್ವಜನಿಕರು ಇದ್ದರು.