ಅಶೋಕಪುರ ಗಣೇಶ ವಿಸರ್ಜನೆ, ಅದ್ದೂರಿ ಶೋಭಾಯಾತ್ರೆ

| Published : Sep 25 2024, 12:58 AM IST / Updated: Sep 25 2024, 12:59 AM IST

ಸಾರಾಂಶ

ಮಡಿಕೇರಿಯ ಅಶೋಕಪುರ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶೋತ್ಸವ ವಿಸರ್ಜನೋತ್ಸವ ಶೋಭಾಯಾತ್ರೆ ನಡೆಯಿತು. ಚಿಮ್ಮುವ ಬೆಂಕಿ, ಪಟಾಕಿಗಳು ಮೈನವಿರೇಳಿಸುವಂತೆ ಮಾಡಿದವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಾನಲ್ಲಿ ಮೋಡಗಳು ಮರೆಯಾಗಿ ಕತ್ತಲು ಆವರಿಸಿದರೂ ಮಂಜಿನ ನಗರಿ ಬೆಳಕಿನ ಚಿತ್ತಾರದಲ್ಲಿ ಝಗಮಗಿಸುತ್ತಿತ್ತು. ತುಂತುರು ಮಳೆ, ಚುಮು ಚುಮು ಚಳಿಯಲ್ಲಿಯೂ ಪೌರಾಣಿಕ ಹಿನ್ನೆಲೆಯ ಕಥಾಸಾರಂಶ ರೋಮಾಂಚನ ಮೂಡಿಸಿ ವಿಶೇಷ ಅನುಭವ ನೀಡಿತು. ನಗರದ ರಾಜಬೀದಿಯಲ್ಲಿ ಸಾಗಿದ ಶೋಭಾಯಾತ್ರೆ ನೋಡುಗರನ್ನು ಸೆಳೆದರೆ, ಡಿಜೆ, ವಾಲಗಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಜನರು ಉತ್ಸವದ ರಂಗನ್ನು ದುಪ್ಪಟ್ಟುಗೊಳಿಸಿದರು.

ಇವೆಲ್ಲ ಚಿತ್ರಣಗಳು ಕಂಡು ಬಂದಿದ್ದು ಮಡಿಕೇರಿಯ ಅಶೋಕಪುರ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೋತ್ಸವ ಶೋಭಾಯಾತ್ರೆಯಲ್ಲಿ.

ಅಶೋಕಪುರದ ಶ್ರೀ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಮಂಟಪದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

50 ನೇ ವರ್ಷದ ಸಂಭ್ರಮದಲ್ಲಿರುವ ಗಣೇಶೋತ್ಸವ ಸಮಿತಿ ‘ಗಣಪತಿಯಿಂದ ಶತಮಹಿಷಿಯ ಸಂಹಾರ’ ಎಂಬ ಪೌರಾಣಿಕ ಹಿನ್ನೆಲೆಯ ಮಂಟಪವನ್ನು ಈ ಬಾರಿ ರಚಿಸಿತ್ತು. ಗಣೇಶ ಸೇರಿದಂತೆ ದೇವಾನುದೇವತೆ, ಅಸುರರ ಕಲಾಕೃತಿಗಳು ಮಂಟಪದ ಅಂದವನ್ನು ಹೆಚ್ಚಿಸಿದವು. ರಂಗುರಂಗಿನ ಕಾಗದದ ಸ್ಫೋಟಕಗಳು, ಚಿಮ್ಮುವ ಬೆಂಕಿ, ಪಟಾಕಿಗಳು ಮೈನವಿರೇಳಿಸುವಂತೆ ಮಾಡಿದವು.

ಗಜಾನನ-ಶತಮಹಿಷಿಯ ನಡುವಿನ ಯುದ್ಧವನ್ನು ಮನಮೋಹಕವಾಗಿ ಪ್ರಸ್ತುತಪಡಿಸಲಾಯಿತು.

ಅಶೋಕಪುರದಿಂದ ಹೊರಟ ಮಂಟಪ ಫೀ‌.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ ನೀಡಿದ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

ಅದ್ದೂರಿಯಾಗಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ನಗರ ಸೇರಿದಂತೆ ವಿವಿಧೆಡೆಗಳಿಂದ ಜನರು ಆಗಮಿಸಿ ಕಟ್ಟಡ, ರಸ್ತೆ ಬದಿಗಳಲ್ಲಿ ನಿಂತು ಮಂಟಪ ವೀಕ್ಷಿಸಿದರು. ಜೊತೆಗೆ ಡಿಜೆ ಹಾಗೂ ವಾಲಗಕ್ಕೆ ಕುಣಿದು ಕುಪ್ಪಳಿಸಿದರು. ಓಂಕಾರೇಶ್ವರ ದೇವಾಲಯ ಸಮೀಪದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ನಗರ ಸೇರಿದಂತೆ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.