ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ. 27 ರಿಂದ 29 ರವರೆಗೆ ನಾಗದೇವರ ಪುನಃ ಪ್ರತಿಷ್ಠೆ, ನಾಗ ಪ್ರತಿಷ್ಠೆ, ರಕ್ತೇಶ್ವರಿ ಪಂಜುರ್ಲಿ ದೈವಗಳ ಪ್ರತಿಷ್ಠೆ, ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀಮಹಾ ಗಣಪತಿ ಹೋಮ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಧಾರ್ಮಿಕ ಚಟುವಟಿಕೆಗಳ, ಕ್ಷೇತ್ರದಲ್ಲಿ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಗಳ, ಸಾಮಾಜಿಕ ಚಟುವಟಿಕೆಗಳ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಶೀಘ್ರ ಕೈಗೊಳ್ಳಬೇಕಾದ ಕಾರ್ಯಗಳನ್ನು ವಿವರಿಸಿದರು. 27ರಂದು ನಾಗಬನದಲ್ಲಿ ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ ನಡೆಯಲಿದೆ. 28ರಂದು ಪೂರ್ವಾಹ್ನ ಕಡೀರ ನಾಗಬನ ಹಾಗೂ ರಕ್ತೇಶ್ವರಿ ಗುಡಿ ಬಳಿ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪೂಜೆ, ನಾಗದೇವರ ಪ್ರತಿಷ್ಠೆ, ರಕ್ತೇಶ್ವರಿ ಪಂಜುರ್ಲಿ ದೈವಗಳ ಪ್ರತಿಷ್ಠೆ, ಸಂಜೆ ಭಜನಾ ಸೇವೆ ನೆರವೇರಲಿದೆ. 29 ರಂದು ಲೋಕಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರನಾಳಿಕೇರ ಗಣಪತಿ ಹೋಮ ಸಂಪನ್ನಗೊಳ್ಳಲಿದೆ. ಅದೇ ದಿನ ತಾಯಂದಿರು ಮಕ್ಕಳಿಗೆ ಹಾಲುಣಿಸುವ ನೂತನ ಕೊಠಡಿಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಲೋಕಾರ್ಪಣೆ ಮಾಡಲಿದ್ದಾರೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಆಡಳ್ತೆ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಕ್ಷೇತ್ರ ಪರಿಚಯದ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ.
ಫೆ. 2 ರಂದು ಸೇವಾ ಕೌಂಟರ್ ಉದ್ಘಾಟನೆ, ಸಂಜೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳಿಗೆ ನರ್ತನ ಸೇವೆ ನಡೆಯಲಿದೆ. ಫೆ. 13 ರ ಮಾಘಶುದ್ಧ ಚೌತಿಯಂದು ದೇವಳದ ವಾರ್ಷಿಕ ಜಾತ್ರೆಯ ಅಂಗವಾಗಿ ಮೂಡಪ್ಪ ಸೇವೆ ನೆರವೇರಲಿದೆ ಎಂದರು. 2022-23 ರಲ್ಲಿ ದೇವಳಕ್ಕೆ 10 ಕೋಟಿಗೂ ಅಧಿಕ ಆದಾಯ ಬಂದಿರುತ್ತದೆ. ದೇವಳದಲ್ಲಿ 63 ಸಿಬ್ಬಂದಿಯವರು ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೋಶಾಲೆಯ ವಿಸ್ತರಣೆಗಾಗಿ 10 ಎಕರೆ ಜಮೀನನ್ನು ದೇವಳಕ್ಕೆ ಮಂಜೂರುಗೊಳಿಸುವಂತೆ ಹಾಗೂ ಕ್ಷೇತ್ರಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ಪುರಂದರ ಕೆ., ಪ್ರಶಾಂತ ಪಿ., ವಿಠಲ ಕೆ., ನವೀನ ಕೆ., ಹೇಮಾವತಿ, ಯಶೋದ ಇದ್ದರು.