ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಎಂದರೆ ರಾಜ್ಯದ ಎರಡನೆಯ ದೊಡ್ಡ ನಗರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ಮಹಾನಗರದಲ್ಲಿ ಏಷಿಯಾದ 2ನೆಯ ಅತಿದೊಡ್ಡ ಎಪಿಎಂಸಿಯೂ ಇದೆ. ಪ್ರತಿನಿತ್ಯ ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತಿದೆ. ಆದರೆ, ಸಮಸ್ಯೆಗಳು ಸಹ ಅಷ್ಟೇ ಭರಪೂರ ಆಗಿಯೇ ಇವೆ.ಹುಬ್ಬಳ್ಳಿ ಎಪಿಎಂಸಿ ಬರೀ ಹುಬ್ಬಳ್ಳಿಗಷ್ಟೇ ಅಲ್ಲ. ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬೀದರ, ರಾಯಚೂರು, ಆಂಧ್ರ ಪ್ರದೇಶದ ಗುಂಟೂರ, ಮಹಾರಾಷ್ಟ್ರದ ಪುಣೆ ಸೇರಿದಂತೆ ವಿವಿಧೆಡೆಯಿಂದ ಆಹಾರೋತ್ಪನ್ನಗಳು ಬರುತ್ತವೆ.
ಪ್ರತಿನಿತ್ಯ ನೂರಾರು ಲಾರಿಗಳು, ನೂರಾರು ಜನ ವರ್ತಕರು, ಸಾವಿರಾರು ಜನ ಹಮಾಲಿ, ದಲ್ಲಾಳಿಗಳು, ಕಾರ್ಮಿಕರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ ಈ ಎಪಿಎಂಸಿ.ಬರೋಬ್ಬರಿ 434 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಎಪಿಎಂಸಿಯಲ್ಲಿ ಎಲ್ಲಿ ನೋಡಿದರಲ್ಲಿ ವಿಶಾಲವಾದ ರಸ್ತೆಗಳು ಕಣ್ಣಿಗೆ ರಾಚುತ್ತವೆ. ಭೇಟಿ ಕೊಟ್ಟರೆ ಅಬ್ಬಾ ಎಂಥ ದೊಡ್ಡ ಎಪಿಎಂಸಿ ಎಂದೆನಿಸದೇ ಇರದು. ಎಪಿಎಂಸಿ ವ್ಯಾಪ್ತಿಗೆ ಬರೋಬ್ಬರಿ 43 ಮಳಿಗೆಗಳು ಇದ್ದರೆ, ಖಾಸಗಿ ಒಡೆತನದಲ್ಲಿ ಬರೋಬ್ಬರಿ 1200ಕ್ಕೂ ಅಧಿಕ ಮಳಿಗೆಗಳಿವೆ. ಸಣ್ಣ, ಅತಿ ಸಣ್ಣ ಮಳಿಗೆಗಳಿಂದ ಹಿಡಿದು ದೊಡ್ಡ ದೊಡ್ಡ ಗೋದಾಮುಗಳಿಗೂ ಸರಿಸಾಟಿಯಿಲ್ಲದಂತಹ ಮಳಿಗೆಗಳು ಇಲ್ಲಿ ಕಾಣುತ್ತವೆ.
ಶೇಂಗಾ, ಒಣಮೆಣಸಿನಕಾಯಿ, ಕಾಳು ಕಡಿ, ಆಹಾರ ಧಾನ್ಯ, ಉಳ್ಳಾಗಡ್ಡಿ, ಆಲೂಗಡ್ಡಿ, ಹಣ್ಣು, ತರಕಾರಿ, ಹೂವು ಸೇರಿದಂತೆ ಇತರೆ ಕೃಷಿ ಹುಟ್ಟುವಳಿಗಳಷ್ಟೇ ಅಲ್ಲ, ವಾರಕ್ಕೊಮ್ಮೆ ನಡೆಯುವ ಜಾನುವಾರು ಸಂತೆ ಕೂಡ ಭರಪೂರವಾಗಿಯೇ ನಡೆಯುತ್ತದೆ. ಬರೀ ಹಗಲು ಅಷ್ಟೇ ಅಲ್ಲ. ಬೆಳಗಿನ ಜಾವವೇ ವಹಿವಾಟು ಶುರುವಾಗುವುದು ಇಲ್ಲಿನ ವಿಶೇಷ. ಸಗಟು ವ್ಯಾಪಾರವೂ ಇಲ್ಲಿ ನಡೆಯುತ್ತದೆ. ಹೋಲ್‌ಸೇಲ್ ವ್ಯಾಪಾರವೂ ನಡೆಯುತ್ತದೆ. ಕೋಟಿಗಟ್ಟಲೇ ವಹಿವಾಟು ನಡೆಯುವ, ಪ್ರತಿನಿತ್ಯ ಲಕ್ಷಗಟ್ಟಲೇ ಸೆಸ್ ಸಂಗ್ರಹವಾಗುವ ದೊಡ್ಡ ಎಪಿಎಂಸಿ ಎನಿಸಿದೆ.ಆದರೆ, ಸೌಲಭ್ಯಗಳ ಲೆಕ್ಕದಲ್ಲಿ ಮಾತ್ರ ಭಾರೀ ಹಿಂದಿಳಿದಿದೆ. ಸಿಬ್ಬಂದಿಗಳು ಸಹ ಅಗತ್ಯಕ್ಕೆ ತಕ್ಕಷ್ಟು ಇಲ್ಲ. ಹಾಗೆ ನೋಡಿದರೆ ಇಷ್ಟೊಂದು ದೊಡ್ಡ ಎಪಿಎಂಸಿ ನಿರ್ವಹಣೆಗೆ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಸೇರಿದಂತೆ 52ಕ್ಕೂ ಹೆಚ್ಚು ಸಿಬ್ಬಂದಿಗಳಿರಬೇಕು. ಆದರೆ, ಇರುವುದು ಬರೀ 16 ಜನ ಮಾತ್ರ. ಇರುವ ನೌಕರರ ವರ್ಗವೇ ಮೂರ್ನಾಲ್ಕು ಸಿಬ್ಬಂದಿಯ ಕೆಲಸವನ್ನು ನಿರ್ವಹಿಸಬೇಕು. ಹೀಗಾಗಿ ಸಕಾಲಕ್ಕೆ ಮಾರುಕಟ್ಟೆಗೆ ಆಗಮಿಸುವ ರೈತರಿಗೆ, ವರ್ತಕರಿಗೆ, ಹಮಾಲಿಗಳಿಗೆ ಸೌಲಭ್ಯ ನೀಡಲು ಹೆಣಗಾಡುವಂತಾಗಿದೆ. ಆದರೂ ಇದ್ದುದ್ದರಲ್ಲೇ ಸಾಕಷ್ಟು ವ್ಯವಸ್ಥೆ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ ನೌಕರ ವರ್ಗ.
ಚುನಾವಣೆಯೇ ಇಲ್ಲ: ಇನ್ನು ಎಪಿಎಂಸಿಗೆ ಕನಿಷ್ಠ ಪಕ್ಷ ಆಡಳಿತ ಮಂಡಳಿಯಾದರೂ ಇದ್ದರೆ ಒಳಿತು. ಅವರಾದರೂ ಅಲ್ಪಸ್ವಲ್ಪವಾದರೂ ರೈತರ ಕಷ್ಟ ನೋವು ಕೇಳಬಹುದು. ಆದರೆ, 2022ರಲ್ಲೇ ಚುನಾಯಿತ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಿದೆ. ಅಲ್ಲಿಂದ ಮತ್ತೆ ಚುನಾವಣೆ ನಡೆದಿಲ್ಲ. ಹೀಗಾಗಿ ಆಡಳಿತ ಮಂಡಳಿ ಇಲ್ಲ. ಈಗ ಏನಿದ್ದರೂ ಅಧಿಕಾರಿಗಳದ್ದೇ ಆಡಳಿತ.ಏನೇ ಆದರೂ ಏಷಿಯಾದ ಎರಡನೆಯ ದೊಡ್ಡ ಎಪಿಎಂಸಿಯಾಗಿರುವ ಎಪಿಎಂಸಿ, ಅನೇಕ ಇಲ್ಲಗಳ ನಡುವೆಯೇ ಕೋಟ್ಯಂತರ ರುಪಾಯಿ ವಹಿವಾಟು ನಡೆಸುತ್ತಿರುವುದಂತೂ ಸತ್ಯ.
ಹುಬ್ಬಳ್ಳಿ ಎಪಿಎಂಸಿ ದೊಡ್ಡ ಎಪಿಎಂಸಿ. ಎಲ್ಲ ಬಗೆಯ ಆಹಾರೋತ್ಪನ್ನಗಳ ಆವಕ ಇಲ್ಲಿ ಆಗುತ್ತದೆ. ಸಾಕಷ್ಟು ಸಲ ಲಾಭ ಮಾಡಿಕೊಂಡು ಹೋಗಿದ್ದು ಇದೆ. ಕೆಲ ಸಲ ಲಾಭ ಆಗಿಲ್ಲ ಎಂದು ಪ್ರತಿಭಟನೆ ನಡೆಸಿಯೂ ಹೋಗಿದ್ದೇವೆ. ಆದರೆ, ಸೌಲಭ್ಯಗಳ ವಿಚಾರದಲ್ಲಿ ಮಾತ್ರ ಹಿಂದಿಳಿದಿರುವುದು ಅಷ್ಟೇ ಸತ್ಯ ಎಂದು ಹಾವೇರಿ ರೈತ ನಿಂಗಪ್ಪ ಹೊಸರಿತ್ತಿ ತಿಳಿಸಿದರು.