ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗವು ಕೈಗೊಂಡ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಹೊಸ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಮತದಾರರ ಸಂಖ್ಯೆ ಕಡಿತಗೊಂಡಿರುವುದು ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗವು ಕೈಗೊಂಡ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಹೊಸ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಮತದಾರರ ಸಂಖ್ಯೆ ಕಡಿತಗೊಂಡಿರುವುದು ಕಂಡುಬಂದಿದೆ. ವಿಶೇಷ ಪರಿಷ್ಕರಣೆಯ ನಂತರ ಬಿಡುಗಡೆಯಾಗಿರುವ ಕರಡು ಪ್ರತಿಯಲ್ಲಿ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 12,20,916ಕ್ಕೆ ಕುಸಿದು ಕಳೆದ 2023ರ ಸಾರ್ವತ್ರಿಕ ಚುನಾವಣೆಯ ಅಂಕಿ-ಅಂಶಗಳಿಗೆ ಹೋಲಿಸಿದರೆ ಜಿಲ್ಲೆಯಾದ್ಯಂತ ಒಟ್ಟು 1,54,253 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಬಿದ್ದಿವೆ.2023ರಲ್ಲಿ 6 ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯೆ 13,75,169 ಇತ್ತು. ಆದರೆ ಇದೀದ ಅದು 12,20,916ಕ್ಕೆ ಕುಸಿತಗೊಂಡಿದ್ದು ಈ ಪೈಕಿ 77,831 ಪುರುಷರು, 76,414 ಮಹಿಳೆಯರು ಹಾಗೂ 8 ಇತರೆ ಮತದಾರರ ಹೆಸರುಗಳು ಕೈಬಿಡಲಾಗಿದೆ.ಬೀದರ್‌ ಕ್ಷೇತ್ರದಲ್ಲಿ ಗರಿಷ್ಠ ಕಡಿತ: ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಮತದಾರರು ಕಡಿತಗೊಂಡಿರುವುದು ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ. ಇಲ್ಲಿ 21,489 ಪುರುಷರು ಹಾಗೂ 21,892 ಮಹಿಳೆಯರು ಸೇರಿದಂತೆ ಒಟ್ಟು 43,383 ಮತದಾರರ ಸಂಖ್ಯೆ ಕಡಿಮೆಯಾಗಿ 1,84,537 ಮತದಾರರು ಉಳಿದಿದ್ದಾರೆ.ಹುಮನಾಬಾದ್‌ ಹಾಗೂ ಬಸವಕಲ್ಯಾಣ: ಹುಮನಾಬಾದ್ ಕ್ಷೇತ್ರದಲ್ಲಿ 12,695 ಪುರುಷರು ಮತ್ತು 12,183 ಮಹಿಳೆಯರು ಸೇರಿದಂತೆ 24,883 ಮತದಾರರು ಕಡಿತಗೊಂಡು ಒಟ್ಟು 2,20,963 ಮತದಾರರು ಉಳಿದಿದ್ದಾರೆ, ಬಸವಕಲ್ಯಾಣ ಕ್ಷೇತ್ರದಲ್ಲಿ 11,581 ಪುರುಷರು ಹಾಗೂ 11,054 ಮಹಿಳೆಯರು ಸಹಿತ ಒಟ್ಟು 22,634 ಮತದಾರರು ಕಡಿಮೆಯಾಗಿದ್ದಾರೆ. ಈಗ ಒಟ್ಟು 2,23,745 ಮತದಾರರು ಉಳಿದಿದ್ದಾರೆ.ಬೀದರ್‌ ದಕ್ಷಿಣ ಹಾಗೂ ಔರಾದ್‌: ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ 12,031 ಪುರುಷರು ಮತ್ತು 11,353 ಮಹಿಳೆಯರು ಸೇರಿ 23,385 ಮತದಾರರ ಕಡಿತವಾಗಿ 1,81,708 ಮತದಾರರು ಉಳಿದಿದ್ದಾರೆ. ಔರಾದ್‌ ಕ್ಷೇತ್ರದಲ್ಲಿ 10,165 ಪುರುಷ ಹಾಗೂ 11,029 ಮಹಿಳಾ ಮತದಾರರು ಸೇರಿ ಒಟ್ಟು 21,194 ಮತದಾರರು ಕಡಿಮೆಯಾಗಿ 1,98,016 ಮತದಾರರು ಪಟ್ಟಿಯಲ್ಲಿ ಉಳಿದಿದ್ದಾರೆ.ಭಾಲ್ಕಿ ಕ್ಷೇತ್ರದಲ್ಲಿ ಕನಿಷ್ಠ ಕಡಿತ: ಜಿಲ್ಲೆಯಲ್ಲಿಯೇ ಅತಿ ಕಡಿಮೆ ಪ್ರಮಾಣದ ಮತದಾರರ ಕಡಿತ ಭಾಲ್ಕಿ ಕ್ಷೇತ್ರದಲ್ಲಿ ದಾಖಲಾಗಿದೆ. ಇಲ್ಲಿ 9,870 ಪುರುಷ ಹಾಗೂ 8,903 ಮಹಿಳಾ ಮತದಾರರು ಸೇರಿದಂತೆ ಒಟ್ಟು 18,774 ಮತದಾರರ ಸಂಖ್ಯೆ ಕಡಿಮೆಯಾಗಿ ಒಟ್ಟು 2,11,947 ಮತದಾರರು ಉಳಿದಿದ್ದಾರೆ.ಬೀದರ್‌ ಜಿಲ್ಲೆಯಲ್ಲಿ ಕರಡು ಪ್ರತಿಯಂತೆ 6,32,572 ಪುರುಷ, 5,88,310 ಮಹಿಳೆ ಹಾಗೂ 34 ಇತರರು ಸೇರಿ ಒಟ್ಟು 12,20,916 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸೆ.23ಕ್ಕೆ ಆಕ್ಷೇಪಣೆ ಕೊನೆ: ಈ ಕರಡು ಮತದಾರರ ಪಟ್ಟಿಯ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ 2026ರ ಆ.24ರಿಂದ ಸೆ. 23ರ ಒಳಗೆ ಸಂಬಂಧಪಟ್ಟ ತಹಸೀಲ್ದಾರ್‌ ಕಚೇರಿಯಲ್ಲಿ ಸಲ್ಲಿಸಲು ಕಾಲಾವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ತಹಸೀಲ್ದಾರ್‌ ಕಚೇರಿಗೆ ಭೇಟಿ ನೀಡಿ, ಹಾಗೂ ಆನ್‌ಲೈನ್‌ನಲ್ಲಿ ceo.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.