ಕನ್ನಡಪ್ರಭ ವಾರ್ತೆ ತಾಳಿಕೋಟೆ

ಬಡವರಿಗೆ ಉಚಿತ ಅಥವಾ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಬಾಗಲಕೋಟೆ ನಗರದಲ್ಲಿ ಅಸ್ಕಿ ಪರಿವಾರದಿಂದ ಸ್ಥಾಪಿತಗೊಂಡಿರುವ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿಯಾಗಿದೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ನುಡಿದರು.

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಗಲಕೋಟೆ, ನಾರಾಯಣ ಹೃದಯಾಲಯ ಬೆಂಗಳೂರ ಹಾಗೂ ದಿ.ಬಿ.ಎಸ್.ಪಾಟೀಲ(ಸಾಸನೂರ) ಫೌಂಡೇಶನ್‌ ಹಾಗೂ ಕೊಣ್ಣೂರಿನ ಅಸ್ಕಿ ಕುಟುಂಬ ಪರಿವಾರದ ವತಿಯಿಂದ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬೆಂಗಳೂರ, ಮುಂಬೈ ಮಹಾನಗರಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಈ ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ವಿಜಯಕುಮಾರ ಅಸ್ಕಿ ಅವರು ವೃತ್ತಿಯಲ್ಲಿ ಅಮೇರಿಕಾದಲ್ಲಿ ಇಂಜನೀಯರ್ ಆಗಿದ್ದರೂ ಕೂಡಾ ನಮ್ಮ ಭಾಗದ ಜನರಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗಬೇಕು. ಇನ್ನೂ ಮುಂದೆ ಯಾವ ರೋಗಕ್ಕೂ ಕೂಡಾ ದೂರದ ಊರುಗಳಿಗೆ ಅಲೇದಾಡಬಾರದೆಂಬ ಉದ್ದೇಶದಿಂದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದಾರೆ. ಸುಮಾರು ೬೦ ಕ್ಕೂ ಹೆಚ್ಚು ವೈದ್ಯರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಈ ಭಾಗಕ್ಕೆ ಆರೋಗ್ಯ ಭಾಗ್ಯದ ಕೊಡುಗೆಯನ್ನು ಅಸ್ಕಿ ಪರಿವಾರ ನೀಡಿದಂತಾಗಿದೆ ಎಂದರು.ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಉದ್ಘಾಟಿಸಿ ಮಾತನಾಡಿ, ಮಾಜಿ ಸಚಿವ ದಿ.ಬಿ.ಎಸ್.ಪಾಟೀಲರು ಈ ಊರಲ್ಲಿ ಜನ್ಮ ತಾಳಿದ್ದಾರೆ ಅವರ ಬೆಳವಣಿಗೆಗೆ ಅಸ್ಕಿ ಕುಟುಂಬದ ಕೊಡುಗೆ ಬಹಳಷ್ಟಿದೆ. ಹಳ್ಳಿಯ ಜನರಿಗೆ ಅನುಕೂಲವಾಗಲಿ ಸೇವೆ ಸಿಗಲಿ ಎಂಬ ಉದ್ದೇಶದಿಂದ ಆಸ್ಪತ್ರೆಯನ್ನು ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪಿಸಿರುವುದು ಶ್ಲಾಘನೀಯ ಎಂದರು. ಮೈಕ್ರೋಸಾಪ್ಟ್ ಆಲ್ ಇಂಡಿಯಾ ಎಐ ಹೆಡ್ ಡೈರೆಕ್ಟರ್ ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ವಿಜಯಕುಮಾರ ಅಸ್ಕಿ ಪ್ರಾಸ್ಥಾವಿಕ ಮಾತನಾಡಿ, ಅಸ್ಕಿ ಆಸ್ಪತ್ರೆಯ ಉದ್ದೇಶ ನಮ್ಮ ಭಾಗದಲ್ಲಿಯ ಬಡ ರೋಗಿಗಳಿಗೆ ತ್ವರಿತಗತಿಯಿಂದ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ಆಸ್ಪತ್ರೆ ಕಟ್ಟಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ ದೇಶದಲ್ಲಿಯೇ ಹೆಸರು ಮಾಡಿರುವಂತಹ ಆಸ್ಪತ್ರೆ. ಆ ಆಸ್ಪತ್ರೆಯೊಂದಿಗೆ ಸೇರಿ ಒಳ್ಳೆಯ ಚಿಕಿತ್ಸೆ ನೀಡಲು ಮುಂದಾಗಿದೆ. ಹೈಟೆಕ್ ಸೌಲಭ್ಯಗಳಿರುವ ಈ ಆಸ್ಪತ್ರೆಯಲ್ಲಿ ಅತೀ ಹೆಚ್ಚು ಬಡರೋಗಿಗಳೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆಯ ಮೂಲಕ ಬಡವರ ಮನೆ ಬಾಗಿಲಿಗೆ ಆಸ್ಪತ್ರೆಯ ಸೇವೆ ಮುಟ್ಟಿಸುವಂತಹ ಕಾರ್ಯ ಮಾಡಲಾಗುತ್ತಿದೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಅಮೆರಿಕಾ ದೇಶದಲ್ಲಿ ಸಿಗುವ ಅತ್ಯಾಧುನಿಕ ಚಿಕಿತ್ಸೆ ಈ ಬಾಗಲಕೋಟೆಯ ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಿ ಬಡವರಿಗೆ ಸಂಜೀವಿನಿಯಾಗುವಂತಹ ಕಾರ್ಯ ಮಾಡಿದ ಅಸ್ಕಿ ಕುಟುಂಬದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಅಸ್ಕಿ ಫೌಂಡೇಶನ್‌ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ, ಡಾ.ಸರಸ್ವತಿ ಚವ್ಹಾಣ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಗಿರುವ ಈ ಆಸ್ಪತ್ರೆಯಿಂದ ಅಸ್ಕಿ ಫೌಂಡೇಶನ್‌ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ಕೊಣ್ಣೂರ ಗ್ರಾಮದಿಂದ ಪ್ರಾರಂಭಿಸಲಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮುದ್ದೇಬಿಹಾಳದಲ್ಲಿ ಆಗಸ್ಟ್‌ನಲ್ಲಿ ತಾಳಿಕೋಟೆ ನವೆಂಬರ್‌ನಲ್ಲಿ ನಾಲತವಾಡದಲ್ಲಿ ಆಯೋಜಿಸಲಾಗುತ್ತಿದೆ ಎಂದರು.ಕೊಣ್ಣೂರಿನ ವೇ.ಶ್ರೀನಾಥಯ್ಯ ಹಿರೇಮಠ ಅವರು ಅಸ್ಕಿ ಕುಟುಂಬದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾಜಮುಖಿ ಕಾರ್ಯಗಳು ಸಲ್ಲಿಸಿದ್ದರ ಕುರಿತು ಶ್ಲಾಘಿಸಿದರು. ಈ ಸಮಯದಲ್ಲಿ ಆಸ್ಪತ್ರೆಯ ತಜ್ಞವೈದ್ಯ ಡಾ.ಪ್ರೀತಿ ವಿಜಯ ಅಸ್ಕಿ, ಜಿಲ್ಲಾ ಪ್ರವಾಸೋಧ್ಯಮ ಉಪನಿರ್ದೇಶಕ ಅರವಿಂದ ಹೂಗಾರ, ಪಿಎಸೈ ಜ್ಯೋತಿ ಖೋತ್, ಬಿ.ಎನ್.ಹಿಪ್ಪರಗಿ, ಪ್ರಭುಗೌಡ ಮದರಕಲ್ಲ, ಎಚ್.ಎಸ್.ಪಾಟೀಲ, ಕೃಷಿ ನೋಡಲ್ ಅಧಿಕಾರಿ ಮಹೇಶ ಜೋಶಿ, ಡಾ.ಬಸವರಾಜ ಅಸ್ಕಿ, ಶಂಕರಗೌಡ ಅಸ್ಕಿ, ಎಸ್.ಜಿ.ಗುಣಕಿ, ಜಿ.ಜಿ.ಅಸ್ಕಿ, ಸುನೀಲ್ ಇಲ್ಲೂರ, ಶಂಕರಗೌಡ ಹಿಪ್ಪರಗಿ, ಸಿ.ಸಿ.ಪಾಟೀಲ, ಡಿ.ಕೆ.ಪಾಟೀಲ, ಎಸ್.ಎಂ.ಸಜ್ಜನ, ಜಿ.ಬಿ,ಬಾಗೇವಾಡಿ, ನಿಂಗನಗೌಡ ಬಿರಾದಾರ, ಬಸನಗೌಡ ಹಡಲಗೇರಿ, ಎಂ.ಎನ್.ಅಸ್ಕಿ, ಗೌಡಪ್ಪಗೌಡ ಹಡಲಗೇರ, ಡಾ.ಶ್ರೀಶೈಲ ಹುಕ್ಕೇರಿ, ಸೋಮನಗೌಡ ಹಡಲಗೇರಿ, ವಿರೇಶಗೌಡ ಅಸ್ಕಿ ಮೊದಲಾದವರು ಉಪಸ್ಥಿತರಿದ್ದರು.ಅಸ್ಕಿ ಫೌಂಡೇಶನ್‌ ನೇತೃತ್ವದಲ್ಲಿ ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಒಳಗೊಂಡು ಗ್ರಾಮೀಣ ಭಾಗಗಳಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು ಇದೇ ವರ್ಷಾಂತ್ಯದಲ್ಲಿ ಆಯೋಜಿಸಿ ಬಡರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವಂತಹ ಕೆಲಸ ಮಾಡಲಾಗುವುದು.

-ಸಿ.ಬಿ.ಅಸ್ಕಿ, ಕಾಂಗ್ರೆಸ್ ಮುಖಂಡರು ಹಾಗೂ ಅಸ್ಕಿ ಫೌಂಡೇಶನ್‌ ಅಧ್ಯಕ್ಷರು.