ಸಾರಾಂಶ
ಪ್ರಮೋದ್ ಮಧ್ವರಾಜ್ ಅವರು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮೀನುಗಾರಿಕಾ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾಗಿದ್ದ ವೇಳೆ ಇದೇ ಟಿ.ಜೆ. ಅಬ್ರಹಾಂ ಅವರು 193 ಕೋಟಿ ರು. ಮೊತ್ತದ ವಂಚನೆ ಮಾಡಿದ ಬಗ್ಗೆ ದೂರು ದಾಖಲಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂತ್ರಿಯಾಗಿದ್ದಾಗ ತಮ್ಮ ಮೇಲೆಯೂ ಅವ್ಯಹಾರದ ಆರೋಪ ಬಂದಾಗ ಯಾಕೆ ರಾಜೀನಾಮೆ ನೀಡಿರಲಿಲ್ಲ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ಪ್ರೇರಿತರಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸೇರಿದಂತೆ ಮೂವರು ವ್ಯಕ್ತಿಗಳು ಖಾಸಗಿ ದೂರು ನೀಡಿದ್ದು, ಪ್ರಕರಣದಲ್ಲಿ ಎಲ್ಲಿ ಕೂಡ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಆದರೂ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಸುಳ್ಳು ದೂರು ರಾಜ್ಯಪಾಲರಿಗೆ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮೀನುಗಾರಿಕಾ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾಗಿದ್ದ ವೇಳೆ ಇದೇ ಟಿ.ಜೆ. ಅಬ್ರಹಾಂ ಅವರು 193 ಕೋಟಿ ರು. ಮೊತ್ತದ ವಂಚನೆ ಮಾಡಿದ ಬಗ್ಗೆ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಜವಾಬ್ದಾರಿಯುತ ಸಚಿವರಾಗಿದ್ದ ತಮ್ಮ ರಾಜೀನಾಮೆಯನ್ನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೇಳಿರಲಿಲ್ಲ. ಅಂದು ಆ ವ್ಯಕ್ತಿ ತಮ್ಮ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದು, ತಾವು ಕೂಡ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಪಡೆದು ಹೊರಬಂದಿದ್ದಿರಿ ಎನ್ನುವುದು ಮರೆಯಬೇಡಿ ಎಂದು ರಮೇಶ್ ಕಾಂಚನ್ ನೆನಪಿಸಿದ್ದಾರೆ.ಅಂತೆಯೇ ಸಿದ್ದರಾಮಯ್ಯ ಅವರು ಕೂಡ ಮುಡಾ ಪ್ರಕರಣದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ, ಆದ್ದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಇಂದು ಬಿಜೆಪಿಯಲ್ಲಿ ಇರಬಹುದು, ಆದರೆ ತಮಗೆ ಹಿಂದೆ ಇದೇ ಅಬ್ರಹಾಂ ನೀಡಿದ ಮಾನಸಿಕ ಕಿರುಕುಳ ಮರೆಯಬಾರದು ಎಂದವರು ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಬದುಕು ತೆರೆದ ಪುಸ್ತಕವಾಗಿದ್ದು, ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಶೀಘ್ರ ಹೊರಬರಲಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.