ಸಾರಾಂಶ
ಓರಿಯಂಟಲ್ ಕಂಪನಿಯ ಡಾಂಬರು ಮಿಶ್ರಣ ಘಟಕದಿಂದ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆಗಳಿಗೆ ತೊಂದರೆಯಾಗುತ್ತಿದೆ.
ಇಳುವರಿ ಸರಿಯಾಗಿ ಬರುತ್ತಿಲ್ಲವೆಂದು ರೈತರು ಗೋಳು । ರೈತರು, ಜಾನುವಾರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ
ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಓರಿಯಂಟಲ್ ಕಂಪನಿಯ ಡಾಂಬರು ಮಿಶ್ರಣ ಘಟಕದಿಂದ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆಗಳಿಗೆ ತೊಂದರೆಯಾಗುತ್ತಿದೆ.
ತಾಲೂಕಿನ ಕಂದಕೂರು ಸೀಮೆಯ ಕೊನೆ ಹಾಗೂ ಯಲಬುರ್ಗಾ ತಾಲೂಕಿನ ಕೊನೆಯ ಎಡ್ಡೋಣಿ ಸೀಮಾದಲ್ಲಿ ಡಾಂಬರು ಮಿಶ್ರಣ ಘಟಕ ಕಾರ್ಯನಿರ್ವಹಿಸುತ್ತಿದೆ. ಈ ಘಟಕದ ಧೂಳು ಪಕ್ಕದಲ್ಲಿನ ಜಮೀನಿನಲ್ಲಿ ಬಿತ್ತನೆ ಮಾಡಲಾದ ಬೆಳೆಗಳ ಮೇಲೆ ಆವರಿಸುತ್ತಿದೆ. ಪರಿಣಾಮವಾಗಿ ರೈತರ ಆರೋಗ್ಯ ಹದಗೆಡುವ ಜತೆಗೆ ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಇಳುವರಿ ಸರಿಯಾಗಿ ಬರುತ್ತಿಲ್ಲವೆಂದು ರೈತರು ಗೋಳು ತೋಡಿಕೊಂಡಿದ್ದಾರೆ.ಡಾಂಬರು ಮಿಶ್ರಣದ ವೇಳೆ ಹೊರಹೊಮ್ಮುವ ರಾಸಾಯನಿಕಯುಕ್ತ ಧೂಳಿನಿಂದ ಈ ಸೀಮಾ ವ್ಯಾಪ್ತಿಯಲ್ಲಿ ತಿರುಗಾಡುವ ರೈತರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣವೆ ಕ್ರಮ ಕೈಗೊಳ್ಳಬೇಕಾಗಿದೆ.
ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ: ಈ ಡಾಂಬರೀಕರಣದ ಪರಿಣಾಮದ ಕುರಿತು ಹಲವು ಸಲ ಕುಷ್ಟಗಿಯ ತಹಸೀಲ್ದಾರ್ ಕಾರ್ಯಾಲಯ, ಯಲಬುರ್ಗಾ ತಹಸೀಲ್ದಾರ್ ಕಾರ್ಯಾಲಯ, ಕೊಪ್ಪಳ ಜಿಲ್ಲಾಧಿಕಾರಿ ಕಾರ್ಯಾಲಯ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಹಾಗೂ ಬೇವೂರು ಪೊಲೀಸ್ ಠಾಣೆ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಓರಿಯಂಟಲ್ ಕಂಪನಿಯವರು ಸ್ಥಾಪಿಸಿದ ಡಾಂಬರೀಕರಣ ಮಿಶ್ರಿತ ಘಟಕದಿಂದ ಹೊಲ ಹಾಗೂ ತೋಟಗಳಲ್ಲಿನ ಬೆಳೆಗಳು ಹಾಳಾಗುತ್ತಿದೆ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.ಲೋಕಾಯುಕ್ತರ ಮೊರೆ:ಈ ಘಟಕದ ವಿರುದ್ಧವಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆ ನ್ಯಾಯಕ್ಕಾಗಿ ಲೋಕಾಯುಕ್ತರ ಮೊರೆ ಹೋಗಬೇಕಾಗುತ್ತದೆ ಎಂದು ಇಲ್ಲಿಯ ರೈತರು ಎಚ್ಚರಿಕೆ ನೀಡಿದ್ದಾರೆ.ನಮ್ಮ ಕಂದಕೂರು ಸೀಮಾದ ಪಕ್ಕದಲ್ಲಿ ಓರಿಯಂಟಲ್ ಕಂಪನಿಯವರು ಡಾಂಬರೀಕರಣ ಘಟಕ ಹಾಕಿದ್ದು ಇದರಿಂದ ಕೆಮಿಕಲ್‌ಯುಕ್ತವಾದ ಧೂಳು ಹರಡುತ್ತಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಬೆಳೆಗಳಿಗೆ ಹಾನಿಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತರ ಗಮನಕ್ಕೆ ತರಲಾಗುವುದು ಎಂದು ಕಂದಕೂರು ಗ್ರಾಮದ ರೈತ ಶಿವಕುಮಾರಗೌಡ ಪಾಟೀಲ ತಿಳಿಸಿದ್ದಾರೆ.