ಸಾರಾಂಶ
ಎಂ. ಪ್ರಹ್ಲಾದ್
ಕನಕಗಿರಿ:ತಾಲೂಕಿನ ಜೀರಾಳ ಗ್ರಾಮದ ಹೊಸ ಜೀರಾಳ ಕಲ್ಗುಡಿ ವರೆಗಿನ ಮೂರು ಕಿಲೋ ಮೀಟರ್ ಡಾಂಬರ ರಸ್ತೆ ಅಭಿವೃದ್ಧಿಯಾಗಿ ಮೂರೇ ತಿಂಗಳಲ್ಲಿ ಕಿತ್ತು ಹೋಗಿದೆ. ಇದರಿಂದ ಪ್ರಯಾಣಿಕರು ಸಂಚಾರಕ್ಕೆ ಪರದಾಡುವಂತಾಗಿದೆ.
ನಾಲ್ಕು ತಿಂಗಳ ಹಿಂದೆ ಜೀರಾಳ ಗ್ರಾಮದಿಂದ ಹೊಸ ಜೀರಾಳ ಕಲ್ಗುಡಿ ವರೆಗಿನ ಮೂರು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2023-24ನೇ ಸಾಲಿನ ಮೈಕ್ರೋ ಯೋಜನೆಯಡಿ ₹ 1.95 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಗುತ್ತಿಗೆದಾರರು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡು ಮೂರ್ನಾಲ್ಕು ತಿಂಗಳ ಹಿಂದೆ ಮುಗಿದಿದ್ದು, ಇದೀಗ ಕೆಸರುಗದ್ದೆಯಾಗಿ ಕಾಣುತ್ತಿದೆ.ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಹೋಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟಿದ್ದು ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಿಸುತ್ತಿದ್ದಾರೆ. ರಸ್ತೆಯ ಅಲ್ಲಲ್ಲಿ ಮಿನಿ ಸೇತುವೆ ನಿರ್ಮಿಸದೆ ಇರುವುದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಕೆಲ ದಿನಗಳ ಹಿಂದೆ ಕೆಎಸ್ಆರ್‌ಟಿಸಿ ಬಸ್ಸೊಂದು ಸಿಲುಕಿಕೊಂಡಿತ್ತು. ನಂತರ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಬಸ್‌ನ್ನು ತಳ್ಳಿದ್ದರಿಂದ ಮುಂದಿನ ಊರು ತಲುಪುವಂತಾಯಿತು. ಇದೇ ರೀತಿ ಹಲವು ಘಟನೆಗಳು ನಡೆಯುತ್ತಿದ್ದು, ಅಧಿಕಾರಿಗಳ ಹಾಗೂ ಗುತ್ತಿಗೆದಾರರಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಕೋಟ್ಯಂತರ ರುಪಾಯಿ ವೆಚ್ಚದ ಈ ರಸ್ತೆ ಕಾಮಗಾರಿ ಕಳಪೆಯಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಜಿಲ್ಲಾ ಉಸ್ತವಾರಿ ಸಚಿವ ಶಿವರಾಜ ತಂಗಡಗಿ ಸೇರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕನಕಗಿರಿ ತಾಲೂಕಿನಲ್ಲಿ ಕೆಲವು ಕಾಮಗಾರಿ ಕಳಪೆಯಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವುಗಳ ಸರಿಪಡಿಸಲು ಆದೇಶ ಮಾಡಿದ್ದೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.ಜೀರಾಳದಿಂದ ಹೊಸ ಜೀರಾಳ ಕಲ್ಗುಡಿ ವರೆಗಿನ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕೋಟಿಗಟ್ಟಲೇ ಹಣ ಗುತ್ತಿಗೆದಾರರ ಪಾಲಾಗಿದೆ. ಈ ಬಗ್ಗೆ ಸಚಿವರು ಹಾಗೂ ಜಿಲ್ಲಾಧಿಕಾರಿ ಕ್ರಮಕೈಗೊಂಡು ರಸ್ತೆ ಪುನರ್ ಅಭಿವೃದ್ಧಿಪಡಿಸಬೇಕು.ಲಕ್ಷ್ಮಣ್ ಮುಧೋಳ ಜೀರಾಳ ಗ್ರಾಮಸ್ಥ ಜೀರಾಳದಿಂದ ಹೊಸ ಕಲ್ಗುಡಿ ವರೆಗಿನ ಮೂರು ಕಿಲೋ ಮೀಟರ್ ರಸ್ತೆ ಕಳಪೆಯಾಗಿರುವ ಕುರಿತು ದೂರು ಬಂದಿದ್ದು, ಕೂಡಲೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ನಾಗರಾಜ, ಎಇಇ ಪಂಚಾಯತ್ ರಾಜ್ ಇಲಾಖೆ