ಆ್ಯಂಬುಲೆನ್ಸ್ ಚಾಲಕನಿಗೆ ಹಲ್ಲೆ: ಮೂವರು ಯುವಕರ ಬಂಧನ

| Published : Jun 11 2024, 01:31 AM IST

ಸಾರಾಂಶ

ಯುವರಾಜ್‌ಸಿಂಗ್, ಮಂಜುನಾಥ್, ಲತೀಶ್ ಬಂಧಿತ ಆರೋಪಿಗಳು, ಇವರು ಯಲಚೇನಹಳ್ಳಿ ನಿವಾಸಿಗಳಾಗಿದ್ದು, ಆ್ಯಂಬುಲೆನ್ಸ್ ಚಾಲಕನಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು, ಹಲ್ಲೆಗೈದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಮಗುವನ್ನು ತುರ್ತು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ ನ್ನು ಅಡ್ಡಗಟ್ಟಿ ಆ್ಯಂಬುಲೆನ್ಸ್ ಚಾಲಕನಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವರಾಜ್‌ಸಿಂಗ್, ಮಂಜುನಾಥ್, ಲತೀಶ್ ಬಂಧಿತ ಆರೋಪಿಗಳು, ಇವರು ಯಲಚೇನಹಳ್ಳಿ ನಿವಾಸಿಗಳಾಗಿದ್ದು, ಆ್ಯಂಬುಲೆನ್ಸ್ ಚಾಲಕನಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು, ಹಲ್ಲೆಗೈದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ವಿವರ:ತುಮಕೂರಿನಿಂದ ಮಗುವನ್ನು ತುರ್ತು ಚಿಕಿತ್ಸೆಗಾಗಿ ತಾಯಿಯ ಜೊತೆ ಬೆಂಗಳೂರಿಗೆ ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಬರುತ್ತಿದ್ದರು. ಆ್ಯಂಬುಲೆನ್ಸ್ ಚಾಲಕ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರನ್ನು ಹಿಂದಕ್ಕೆ ಹಾಕಿ ಮುಂದೆ ಬಂದಿದ್ದಾನೆ. ಇದಕ್ಕೆ ಕೋಪಗೊಂಡ ಕಾರು ಚಾಲಕ ಸೇರಿ ಮೂರು ಯುವಕರು ಆ್ಯಂಬುಲೆನ್ಸ್ನನ್ನು ಹಿಂಬಾಲಿಸಿಕೊಂಡು ಬಂದಿದ್ದು, ನೆಲಮಂಗಲ ಸಮೀಪದ ಬೊಮ್ಮನಹಳ್ಳಿಯ ಟೋಲ್ ಸಮೀಪ ನಿಧಾನವಾಗುತ್ತಿದ್ದಂತೆ ಅಡ್ಡಗಟ್ಟಿ ಚಾಲಕನಿಗೆ ಹೊಡೆದಿದ್ದಾರೆ.

ಸಮೀಪದಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿ, ಆ್ಯಂಬುಲೆನ್ಸ್ ಅನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಆರೋಪಿಗಳು ಎಸ್ಕೇಪ್ ಆಗಿದ್ದು ಅನಂತರ ದೂರು ನೀಡಿದ ಬೆನ್ನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾನವಿಯತೆ ಇಲ್ಲದ ಯುವಕರು:

ಮಗುವನ್ನು ಉಳಿಸಲು ಬಿಡಿ ಎಂದು ತಾಯಿ ಮನವಿ ಮಾಡಿದರೂ, ಆ್ಯಂಬುಲೆನ್ಸ್ನಲ್ಲಿ ಮಗು ತುರ್ತು ಚಿಕಿತ್ಸೆ ಸ್ಥಿತಿಯಲ್ಲಿದ್ದರೂ ಕೂಡ ಮಾನವೀಯತೆ ಮರೆತು ಕಾರಿನಲ್ಲಿದ್ದ ಯುವಕರು, ಚಾಲಕನಿಗೆ ಹಲ್ಲೆ ಮಾಡಿದ್ದು ದೊಡ್ಡ ಹೈಡ್ರಾಮವನ್ನು ಸೃಷ್ಟಿಸಿತ್ತು. ಸರಿಯಾದ ಸಮಯಕ್ಕೆ ಪೊಲೀಸರು ಬರದಿದ್ದರೆ ಮಗುವಿನ ಪ್ರಾಣ ಅಲ್ಲಿಯೇ ಹೋಗುವ ದುಸ್ಥಿತಿ ಎದುರಾಗಿತ್ತು.