ಸಾರಾಂಶ
- ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ । ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಮಹಿಳೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಮ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ಅರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆಯಲ್ಲಿ ಡಾ. ವೆಂಕಟೇಶ್ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಮಹಿಳೆಯೊಬ್ಬರು ಏಕಾಏಕಿ ಚಪ್ಪಲಿ ಎಸೆದು, ಕೊರಳಿನ ಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿರುವುದು ಖಂಡನೀಯ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿದ್ದಲ್ಲಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಇತ್ತೀಚಿಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‍ಗಳ ಮೇಲೆ ಹಲ್ಲೆಗಳು ಸಾಮಾನ್ಯವಾಗಿವೆ. ಆದರೆ, ಈ ಬಗ್ಗೆ ಯಾವುದೇ ಕ್ರಮವಹಿಸದಿರುವ ಕಾರಣ ಹಲ್ಲೆ ಪ್ರಕರಣಗಳು ಮರುಕಳಿಸುತ್ತಿದೆ. ಒಮ್ಮೆ ಈ ರೀತಿಯ ಪ್ರಕರಣಕ್ಕೆ ಕಡಿವಾಣ ಹಾಕಿದರೆ ಮಾತ್ರ ಯಾವುದೇ ವ್ಯಕ್ತಿ ಈ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ ಎಂದರು.
ಹಬ್ಬ ಹರಿದಿನ ಹಾಗೂ ಕೋವಿಡ್ ವೇಳೆಯಲ್ಲಿ ಪ್ರಾಣದ ಹಂಗು ತೊರೆದು ರೋಗಿಗಳ ಪ್ರಾಣ ರಕ್ಷಣೆಗೆ ಮುಂದಾಗುವ ವೈದ್ಯ ರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಇಂಥ ವೈದ್ಯರಿಗೆ ಏಕಾಏಕಿ ದಾಳಿ ನಡೆಸಿರುವುದು ಅಮಾನವೀಯ. ಇಂತಹ ಕೃತ್ಯವೆಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ವೈದ್ಯರ ಪ್ರಾಣ ಹಾಗೂ ಮಾನಹಾನಿಗೆ ಮುಂದಾದ ಮಹಿಳೆ ಹಾಗೂ ಅವರ ಸಹೋದರರಿಗೆ ಬೇಲ್ ಸಿಗದ ರೀತಿ ಯಲ್ಲಿ ಪೊಲೀಸರು ಕ್ರಮ ವಹಿಸಬೇಕು. ಇದನ್ನು ಮೀರಿ ಒತ್ತಡಕ್ಕೆ ಮಣಿದು ಬೇಲ್‌ಗೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮ ಭರಣ್ಯ, ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಜಯಣ್ಣ, ಮುಖಂಡರಾದ ಕೆ.ಆರ್. ಅನಿಲ್‍ಕುಮಾರ್, ಕವೀಶ್, ರೇವನಾಥ್, ನವೀನ್, ಜಗದೀಶ್, ಮಂಜುನಾಥ್, ಧರ್ಮರಾಜು, ರಾಜೇಶ್ ಇದ್ದರು.----11 ಕೆಸಿಕೆಎಂ 3ವೈದ್ಯರ ಮೇಲೆ ಹಲ್ಲೆ ನಡೆಸಿರುವ ಮಹಿಳೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಮ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.