ಸಾರಾಂಶ
ಪಚ್ಚಿ ಈ ಹಿಂದೆ ಶಿವಮೊಗ್ಗ ಜೈಲಿನಲ್ಲಿದ್ದನು. ಅಲ್ಲೂ ಇದೇ ರೀತಿ ಸಹ ಕೈದಿ ಹಲ್ಲೆ ಮಾಡಿದ್ದ. ಈಗ ತನ್ನ ಹಳೆ ಚಾಳಿ ಶುರು ಮುಂದುವರೆಸಿದ್ದಾನೆ.
ಧಾರವಾಡ: ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಓರ್ವ ಕೈದಿಗೆ ಇನ್ನೋರ್ವ ಕೈದಿ ಟೈಲ್ಸ್ ಅನ್ನು ಚಾಕು ರೀತಿ ಬಳಸಿ ಹಲ್ಲೆ ಮಾಡಿದ್ದಾನೆ.
ಗಾಯಾಳು ಕೈದಿಯನ್ನು ಸುಲೇಮಾನ್ ಎಂದು ಗುರುತಿಸಲಾಗಿದೆ. ಪಚ್ಚಿ ಎಂಬ ಇನ್ನೋರ್ವ ಕೈದಿ ಸುಲೇಮಾನ್‌ಗೆ ಟೈಲ್ಸ್‌ನಿಂದ ಚುಚ್ಚಿ ಗಾಯಗೊಳಿಸಿದ್ದಾನೆ. ಹಲ್ಲೆಗೆ ಒಳಗಾದ ಕೈದಿಗೆ ಚಿಕಿತ್ಸೆ ಕೊಡಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಉಡುಪಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಚಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಸುಲೇಮಾನ್ ಬೆಂಗಳೂರು ಮಲ್ಲೇಶ್ವರಂನ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾನೆ.
ಪಚ್ಚಿ ಈ ಹಿಂದೆ ಶಿವಮೊಗ್ಗ ಜೈಲಿನಲ್ಲಿದ್ದನು. ಅಲ್ಲೂ ಇದೇ ರೀತಿ ಸಹ ಕೈದಿ ಹಲ್ಲೆ ಮಾಡಿದ್ದಕ್ಕೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಧಾರವಾಡಕ್ಕೆ ಬಂದ ಮೇಲೆ ಈತ ಮತ್ತದೇ ತನ್ನ ಹಳೆ ಚಾಳಿ ಶುರು ಮುಂದುವರೆಸಿದ್ದಾನೆ. ಕಳೆದ ನಾಲ್ಕು ತಿಂಗಳ ಹಿಂದೆ ಧಾರವಾಡ ಜೈಲಿನ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದ.ಪಚ್ಚಿ ಶನಿವಾರ ಕ್ಷುಲ್ಲಕ ಕಾರಣಕ್ಕಾಗಿ ಸುಲೇಮಾನ್ ಮೇಲೆ ಮತ್ತೆ ಹಲ್ಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಎಸಿಪಿ ಬಸವರಾಜ್ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಚ್ಚಿ ಮೇಲೆ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.