ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ವಕೀಲರ ಸಂಘದ ಸದಸ್ಯ, ನ್ಯಾಯವಾದಿ ರಾಜನ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಉಡುಪಿ ವಕೀಲರ ಸಂಘ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ನಿಯೋಗವು ಶನಿವಾರ ಜಿಲ್ಲಾ ಎಸ್ಪಿ ಡಾ.ಅರುಣ್ ಅವರಿಗೆ ಮನವಿ ಸಲ್ಲಿಸಿತು.ಡಿ.11ರಂದು ರಾತ್ರಿ ವಕೀಲ ರಾಜನ್ ಕುಮಾರ್ ತನ್ನ ಸ್ಕೂಟರ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಆದಿಉಡುಪಿ ಶಾಲೆ ಬಳಿ ವಿರುದ್ಧ ದಿಕ್ಕಿನಿಂದ ಅಪಾಯಕಾರಿಯಾಗಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ, ಕಾರು ಚಾಲಕ ಅವರ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರು ದಾಖಲಾಗಿ ಮೂರು ದಿನವಾದರೂ ಆರೋಪಿಯನ್ನು ಪೋಲಿಸರು ಬಂಧಿಸದಿರುವುದನ್ನು ಡಿ.13ರಂದು ಉಡುಪಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಖಂಡಿಸಲಾಗಿತ್ತು. ವಕೀಲರಿಗೆ ಸಿಗದ ನ್ಯಾಯ, ಜನಸಾಮಾನ್ಯರಿಗೆ ಸಿಗುವುದೇ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಉಂಟಾಗುತ್ತಿದೆ. ಐಷಾರಾಮಿ ಕಾರಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಪುಂಡಾಟ ನಡೆಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ವಕೀಲರ ಸಂಘವು ಆತಂಕ ವ್ಯಕ್ತಪಡಿಸಿದೆ.ಈ ಪ್ರಕರಣದಲ್ಲಿ ಎಸ್ಪಿಯವರೇ ಖುದ್ದಾಗಿ ಆಸಕ್ತಿ ವಹಿಸಿ ಆರೋಪಿಯನ್ನು ತಕ್ಷಣ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುವುದೆಂದು ಮನವಿಯಲ್ಲಿ ತಿಳಿಸಿದೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭ ವಕೀಲರ ಸಂಘ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್., ಖಜಾಂಚಿ ಗಂಗಾಧರ ಎಚ್.ಎಂ., ಕಾರ್ಯಕಾರಿ ಸಮಿತಿ ಸದಸ್ಯ ಆರೂರು ಸುಕೇಶ ಶೆಟ್ಟಿ, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಬಿ.ನಾಗರಾಜ್, ಹಿರಿಯ ವಕೀಲರಾದ ಆನಂದ ಮಡಿವಾಳ, ಮುರಳೀಧರ ರಾವ್ ಹಾಗೂ ಸಂದೀಪ್ ಕುಮಾರ್ ಉಪಸ್ಥಿತರಿದ್ದರು.