ದಾಬಸ್‍ಪೇಟೆ: ರಸ್ತೆ ಬದಿ ಕಾರು ನಿಲ್ಲಿಸಿಕೊಂಡಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ ಲಕ್ಷಾಂತರ ರು. ನಗದು ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಆರ್.ಟಿ.ನಗರದ ನಿವಾಸಿ ನವೀನ್ ಹಲ್ಲೆಗೊಳಗಾದವರು. ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನತ್ತ ಬರುವಾಗ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಕಾರನ್ನು ಸರ್ವೀಸ್ ರಸ್ತೆ ಬದಿ ನಿಲ್ಲಿಸಿದ್ದಾರೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ತಲೆಗೆ ರಾಡ್‍ನಿಂದ ಹಲ್ಲೆ ಮಾಡಿ, ಆತನ ಬಳಿ ಇದ್ದ 1.75ಲಕ್ಷ ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.ಅಡುಗೆ ಕಂಟ್ರ್ಯಾಕ್ಟರ್ ಆಗಿರುವ ನವೀನ್ ಮೂಲತಃ ಹಾಸನದ ಚನ್ನರಾಯಪಟ್ಟಣ ಮೂಲದವರು. ಹಬ್ಬದ ನಿಮಿತ್ತ ಪತ್ನಿಯ ತವರುಮನೆ ನೆಲಮಂಗಲದ ಮೋಟಗಾನಹಳ್ಳಿಯಿಂದ ನೆಲಮಂಗಲಕ್ಕೆ ಬರುತ್ತಿದ್ದಾಗ ಕೃತ್ಯ ನಡೆದಿದೆ. ಕ್ಯಾಟರಿಂಗ್ ಗ್ರಾಹಕರಿಂದ ಪಡೆದ ಅಡ್ವಾನ್ಸ್ ಹಣದೊಂದಿಗೆ ನೆಲಮಂಗಲ ಮಾರ್ಗವಾಗಿ ಬೆಂಗಳೂರಿನ ಕಡೆಗೆ ತೆರಳುತ್ತಿದ್ದರು. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿದ್ದ ನವೀನ್‌ರನ್ನು ಸ್ಥಳೀಯರು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ ಸ್ಪೆಕ್ಟರ್ ನರೇಂದ್ರ ಬಾಬು ನೇತೃತ್ವದ ವಿಶೇಷ ತಂಡ ದುಷ್ಕರ್ಮಿಗಳ ಶೋಧ ಕಾರ್ಯದಲ್ಲಿ ತೊಡಗಿದೆ.ಪೋಟೋ 3 : ಹಲ್ಲೆಗೊಳಗಾದ ನವೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.