ಮಹಿಳೆ ಮೇಲೆ ಹಲ್ಲೆ - ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಲಿದೆ

| Published : Jan 04 2024, 01:45 AM IST

ಸಾರಾಂಶ

ಇಂತಹ ಪ್ರಕರಣಗಳ ಬಗ್ಗೆ ಸರ್ಕಾರ ಸುಮ್ಮನೆ ಕೂತಿಲ್ಲ. ಬೆಳಗಾವಿಯೇ ಆಗಲಿ, ಮಂಗಳೂರೇ ಆಗಲಿ ಎಲ್ಲಿ ನಡೆದರೂ ತಪ್ಪಿತಸ್ಥರ ಮೇಲೆ ಕ್ರಮವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ನಡೆದಿರುವ ಹಲ್ಲೆ ಕುರಿತು ತನಿಖೆ ನಡೆಯುತ್ತಿದ್ದು, ಇಂತಹ ಘಟನೆಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬುಧವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿಯ ಪ್ರಕರಣ ರಾಜ್ಯದಲ್ಲಿ ಆಗಾಗ ನಡೆಯುತ್ತಿವೆ. ಹಾಗಂತ ಇಂತಹ ಪ್ರಕರಣಗಳ ಬಗ್ಗೆ ಸರ್ಕಾರ ಸುಮ್ಮನೆ ಕೂತಿಲ್ಲ. ಬೆಳಗಾವಿಯೇ ಆಗಲಿ, ಮಂಗಳೂರೇ ಆಗಲಿ ಎಲ್ಲಿ ನಡೆದರೂ ತಪ್ಪಿತಸ್ಥರ ಮೇಲೆ ಕ್ರಮವಾಗಲಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮೈದುನ ಮತ್ತು ಅತ್ತಿಗೆ ಜತೆ ನಡೆದ ಗಲಾಟೆಯನ್ನು ಅಂಗನವಾಡಿ ಕಾರ್ಯಕರ್ತರೊಬ್ಬರು ಬಿಡಿಸಲು ಹೋಗಿದ್ದರು. ಮಧ್ಯಸ್ಥಿಕೆ ಮಾಡಲು ಹೋಗಿದ್ದ ಅವರ ಮೇಲೆ ಹಲ್ಲೆಯಾಗಿದೆ. ನಾನು ಅವರನ್ನು ಭೇಟಿಯಾಗುತ್ತೇನೆ ಎಂದರು.

ಧಾರವಾಡ ಲೋಕಸಭಾ ಚುನಾವಣೆಗೆ ಅರ್ಜಿ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಧಾರವಾಡದಲ್ಲಿ ಈ ಕುರಿತು ನಡೆಸಿದ ಸಭೆಯಲ್ಲಿ ಅರ್ಜಿಗಳನ್ನು ಪಡೆದಿದ್ದು ಗೌಪ್ಯವಾಗಿ ಇಟ್ಟುಕೊಳ್ಳಲಾಗಿದೆ. ಬರುವ ಜ. 10ರಂದು ಪಕ್ಷದ ಸಭೆ ಕರೆಯಲಾಗಿದೆ. ಟಿಕೆಟ್ ವಿಚಾರವಾಗಿ ಜಿಲ್ಲೆಯ ಎಲ್ಲ ಮುಖಂಡರನ್ನು ಕರೆದುಕೊಂಡು 2ನೇ ಹಂತದ ಸಭೆ ನಡೆಸಲಿದ್ದೇವೆ. 10-12 ಆಕಾಂಕ್ಷಿಗಳಿದ್ದಾರೆ. ಅರ್ಹರನ್ನು ಅಳೆದು ತೂಗಿ ಆಯ್ಕೆ ಮಾಡಬೇಕಾಗುತ್ತದೆ. ಅರ್ಜಿ ಹಾಕಿದವರಿಗೆ ಟಿಕೆಟ್ ಕೊಡಬೇಕು ಎಂಬ ಚಿಂತನೆ ಇದ್ದು, ಟಿಕೆಟ್ ಕೊಡುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು. ಇನ್ನು ಹುಬ್ಬಳ್ಳಿಯ ರಾಮಜನ್ಮಭೂಮಿ ಹೋರಾಟಗಾರನ ಬಂಧನ ವಿಚಾರವಾಗಿ ಈಗಾಗಲೇ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ ಎಂದು ಹೆಬ್ಬಾಳಕರ ಹೇಳಿದರು.