ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸೇವಾನಿರತ ಮಹಿಳಾ ಪೌರಕಾರ್ಮಿಕರ ಮೇಲೆ ಮುಸ್ಲಿಂ ಯುವಕ ಮನ್ನು ಮತ್ತು ಆತನ ತಾಯಿ ಸೇರಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ನಗರದ ೨೩ನೇ ವಾರ್ಡ್‌ನಲ್ಲಿ ಶನಿವಾರ ನಡೆದಿದೆ.ಎಂದಿನಂತೆ ಸೇವೆಯಲ್ಲಿ ನಿರತರಾಗಿದ್ದ ಲತಾ, ಕಲಾವತಿ, ಪಾರ್ವತಮ್ಮ, ಅನುರಾಧ ಮತ್ತು ವೆಂಕಟಲಕ್ಷ್ಮಿ ಎಂಬುವರು, ವಾರ್ಡ್ ವ್ಯಾಪ್ತಿಯ ಮುಜಾರ್ ಮೊಹಲ್ಲಾದಲ್ಲಿ ಚರಂಡಿ ಸ್ವಚ್ಛತೆಯಲ್ಲಿ ತೊಡಗಿದ್ದರು. ಚರಂಡಿಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವನ್ನು ಹೊರ ತೆಗೆದು ರಸ್ತೆ ಬದಿ ಗುಡ್ಡೆ ಹಾಕಿದ್ದರು. ಇದನ್ನು ಗಮನಿಸಿದ್ದೇ ತಡ ಮನ್ನು ಮತ್ತು ಆತನ ತಾಯಿ ಬಂದು, ನಮ್ಮ ಮನೆ ಮುಂದೆ ಏಕೆ ಕೊಳೆತಿರುವ ಕಸ ಹಾಗೂ ತ್ಯಾಜ್ಯದ ಗುಡ್ಡೆ ಹಾಕಿದ್ದೀರಾ ಎಂದು ಏಕವಚನದಲ್ಲಿ ಬಾಯಿಗೆ ಬಂದಂತೆ ನಿಂದಿಸಿದ್ದಲ್ಲದೆ, ಮನೆಯಲ್ಲಿದ್ದ ದೊಣ್ಣೆ ತಂದು ಹಲ್ಲೆ ಮಾಡಿ ದುರ್ವರ್ತನೆ ತೋರಿದ್ದಾರೆ. ಮಹಿಳಾ ಪೌರ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜೊತೆಯಲ್ಲಿದ್ದವರು ಕೂಡಲೇ ಅವರನ್ನು ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅನುರಾಧ ಮಾತನಾಡಿ, ನಾವು ಚರಂಡಿ ಸ್ವಚ್ಛ ಮಾಡಿ ಕಸವನ್ನು ರಸ್ತೆ ಪಕ್ಕ ಹಾಕಿದ್ದೆವು, ಅದನ್ನು ತುಂಬಿಕೊಳ್ಳಲು ಹಿಂದೆಯೇ ಟ್ರ್ಯಾಕ್ಟರ್ ಬರುತ್ತಿದೆ ಎಂದು ಹೇಳಿದರೂ ಕೇಳದೆ, ಬಾಯಿಗೆ ಬಂದಂತೆ ಬೈಯ್ದರು. ನಾನು ಕಂದಾಯ ಕಟ್ಟಿದರೆ ನಿಮಗೆ ಸಂಬಳ ಸಿಗೋದು ಎಂದೆಲ್ಲಾ ನಿಂದಿಸಿದರು. ಅಷ್ಟಕ್ಕೇ ಸುಮ್ಮನಾಗದೆ ದೊಣ್ಣೆಯಿಂದ ಹಲ್ಲೆ ಮಾಡಿದರು ಎಂದು ವಿವರಿಸಿದರು.ಘಟನೆ ಕುರಿತು ಮಾತನಾಡಿದ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ನಗರವನ್ನು ಸ್ವಚ್ಛವಾಗಿಡಲು ಎಲ್ಲ ಸಂದರ್ಭಗಳಲ್ಲೂ ಕೆಲಸ ಮಾಡುವ ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂಥವರ ಮೇಲೆ ಹಲ್ಲೆ ಆಗಿರುವುದು ಖಂಡನೀಯ ಮತ್ತು ದುರದೃಷ್ಟಕರ. ಆರೋಪಿಗಳು ಯಾರೇ ಆದರೂ ಕಾನೂನು ಪ್ರಕಾರ ಅವರಿಗೆ ಶಿಕ್ಷೆ ಆಗಬೇಕು ಎಂದರು.
* ಬಾಕ್ಸ್‌ನ್ಯೂಸ್: ಕಾನೂನು ಕ್ರಮ ಕೈಗೊಳ್ಳಲಾಗುವುದುಪೌರಾಯಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಮೊದಲೇ ಪೌರಕಾರ್ಮಿಕರ ಕೊರತೆ ಇದೆ. ಇರುವವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅಂಥವರ ಮೇಲೆ ಕೈ ಮಾಡಿ ನಿಂದಿಸುವುವುದು ಸರಿಯಲ್ಲ. ಕರ್ತವ್ಯ ನಿರತ ಶ್ರಮಿಕ ವರ್ಗದ ಅದರಲ್ಲೂ ಮಹಿಳೆಯರ ಮೇಲೆ ಹಲ್ಲೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.