ಯುವತಿ ಮೇಲೆ ಹಲ್ಲೆ: ಮೂವರು ಕಿಡಿಗೇಡಿಗಳ ಬಂಧನ

| Published : Mar 09 2024, 01:39 AM IST

ಸಾರಾಂಶ

ತೇರದಾಳದ ಕಾಲೇಜಿನಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಚುಡಾಯಿಸಿದ್ದಲ್ಲದೆ ಮೊಬೈಲ್‌ ನಂಬರ್‌ ಕೊಡದ್ದಕ್ಕೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ತೇರದಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತೇರದಾಳದ ಕಾಲೇಜಿನಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಚುಡಾಯಿಸಿದ್ದಲ್ಲದೆ ಮೊಬೈಲ್‌ ನಂಬರ್‌ ಕೊಡದ್ದಕ್ಕೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ತೇರದಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಬಕವಿ ನಿವಾಸಿಗಳಾದ ಅನ್ವರ್‌ ಮಕಾನದಾರ, ಅಯಾನ್ ಪಾಟೀಲ, ಜಾವಿದ್ ನದಾಫ್ ಬಂಧಿತರು. ಮಹಾಲಿಂಗಪುರದ ಯುವತಿ ತೇರದಾಳದ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿತ್ಯ ಮಹಾಲಿಂಪುರದಿಂದ ಬಸ್ ಮೂಲಕ ಕಾಲೇಜಿಗೆ ಹೋಗಿ ಬರುತ್ತಾಳೆ. ಮೂರ್ನಾಲ್ಕು ದಿನಗಳಿಂದ ರಬಕವಿ ಬಸ್ ನಿಲ್ದಾಣದಲ್ಲಿ ಮೂವರು ಕಿಡಿಗೇಡಿಗಳು ಬೈಕ್‌ನಲ್ಲಿ ಯುವತಿಯ ಬೆನ್ನತ್ತಿ ಚುಡಾಯಿಸುತ್ತಿದ್ದು, ಬುಧವಾರ ಕಾಲೇಜು ಮುಗಿಸಿ ಮಹಾಲಿಂಗಪುರಕ್ಕೆ ತೆರಳುವ ವೇಳೆ ಸಂಜೆ ಬೈಕ್ ಮೇಲೆ ಬಂದ ಆರೋಪಿಗಳು ಮೊಬೈಲ್‌ನಲ್ಲಿ ಯುವತಿಯ ವಿಡಿಯೋ ಮಾಡುವುದಲ್ಲದೆ ಮೊಬೈಲ್‌ ನಂಬರ್‌ ಕೊಡುವಂತೆ ಯುವತಿಗೆ ಪೀಡಿಸಿದ್ದಾರೆ. ನಂಬರ್ ಕೊಡಲು ನಿರಾಕರಿಸಿದಾಗ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆ ತಡೆಯಲು ಹೋದ ಇನ್ನಿಬ್ಬರು ಯುವತಿಯರಿಗೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮೂವರ ಬಂಧನ: ಯುವತಿಯ ಪೋಷಕರು ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ತೇರದಾಳ ಠಾಣೆ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿ ಆಸ್ಪತ್ರೆಗೆ: ಘಟನೆಯಿಂದ ಮಾನಸಿಕವಾಗಿ ಆಘಾತಗೊಂಡ ಯುವತಿಯನ್ನು ರಾಮಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಯಿಂದ ಎಚ್ಚೆತ್ತ ಪೊಲೀಸರು ರಬಕವಿ-ಬನಹಟ್ಟಿ ನಗರಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.