₹೧.೭೨ ಕೋಟಿ ಮೌಲ್ಯದ ಸ್ವತ್ತು ಜಪ್ತಿ: ಡಿಸಿ ಗಂಗೂಬಾಯಿ

| Published : Apr 02 2024, 01:05 AM IST

ಸಾರಾಂಶ

ದಾಖಲೆ ಇಲ್ಲದ ₹೨೨,೨೯,೫೦೦ ನಗದು ವಶಕ್ಕೆ ಪಡೆದಿದ್ದು, ಅದರಲ್ಲಿ ₹೨ ಲಕ್ಷಕ್ಕೆ ದಾಖಲೆ ನೀಡಿದ ಕಾರಣ ಬಿಡುಗಡೆ ಮಾಡಲಾಗಿದೆ.

ಕಾರವಾರ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆಯಾದ ಬಳಿಕ ಜಿಲ್ಲೆಯಲ್ಲಿ ₹೧.೭೨ ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ದಾಖಲೆ ಇಲ್ಲದ ₹೨೨,೨೯,೫೦೦ ನಗದು ವಶಕ್ಕೆ ಪಡೆದಿದ್ದು, ಅದರಲ್ಲಿ ₹೨ ಲಕ್ಷಕ್ಕೆ ದಾಖಲೆ ನೀಡಿದ ಕಾರಣ ಬಿಡುಗಡೆ ಮಾಡಲಾಗಿದೆ. ಉಳಿದ ₹೨೦,೨೯,೫೦೦ ನಗದು ಖಜಾನೆ ಇಲಾಖೆಯಲ್ಲಿ ಇರಿಸಲಾಗಿದೆ. ₹೧.೨೨ ಕೋಟಿ ಮೌಲ್ಯದ ೫೭೪೨೭.೪೬೫ ಲೀ. ಮದ್ಯ, ₹೬೪ ಸಾವಿರ ಮೌಲ್ಯದ ೩.೫೫೯ ಕೆಜಿ ಮಾದಕ ವಸ್ತು, ₹೨೮.೭೩ ಲಕ್ಷ ಮೌಲ್ಯದ ಇತರ ವಸ್ತು ಜಪ್ತಿ ಮಾಡಲಾಗಿದೆ ಎಂದರು.

ಪೊಲೀಸರಿಂದ ೩೪, ಅಬಕಾರಿ ಇಲಾಖೆಯಿಂದ ೧೬೧ ಪ್ರಕರಣ ದಾಖಲಾಗಿದೆ. ೨೫ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರದಲ್ಲೂ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಎಲ್ಲ ಚೆಕ್‌ಪೋಸ್ಟ್‌ನಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಅದರ ವಿಡಿಯೋ ಡಿಸಿ ಕಚೇರಿಯಲ್ಲಿ ತೆರೆಯಲಾದ ಕಂಟ್ರೋಲ್ ರೂಮಿನಲ್ಲೂ ಕುಳಿತು ನೋಡಬಹುದು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ೧೯೫೦ ಸಹಾಯವಾಣಿಗೆ ಅಥವಾ ಸಿ- ವಿಜಿಲ್ ಆ್ಯಪ್ ಆನ್‌ಲೈನ್‌ನಲ್ಲೂ ಸಾರ್ವಜನಿಕರು ದೂರು ಸಲ್ಲಿಸಬಹುದು.ವಿಚಕ್ಷಣಾ ದಳದವರು(ಫ್ಲೈಯಿಂಗ್ ಸ್ಕ್ವಾಡ್) ತಕ್ಷಣ ಅಲ್ಲಿಗೆ ತೆರಳಿ ಪರಿಶೀಲನೆ ಮಾಡಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ದೂರು ದಾಖಲಿಸಿಕೊಳ್ಳುತ್ತಾರೆ. ಆಯೋಗದ ನಿರ್ದೇಶನದಂತೆ ವಿವಾಹ, ಮುಂಜಿ ಇತ್ಯಾದಿ ಕಾರ್ಯಗಳಿಗೆ ಅನುಮತಿ ಬೇಕಿಲ್ಲ. ಆದರೆ ಸಂಬಂಧಿಸಿದ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗೆ ಸೂಕ್ತ ದಾಖಲೆಯನ್ನು ನೀಡಿ ಮೌಖಿಕ ಮಾಹಿತಿ ನೀಡಿದರೆ ಉತ್ತಮ ಎಂದರು. ಮದ್ಯ ಮಾರಾಟ ನಿಷೇಧ

ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟಣೆಗಳಿಗೆ ಅವಕಾಶವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮೇ 5ರಂದು ಸಂಜೆ 5 ಗಂಟೆಯಿಂದ ಮೇ 7ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಜೂ. 3ರಂದು ಮಧ್ಯರಾತ್ರಿ 12 ಗಂಟೆಯಿಂದ ಜೂ. 4ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಎಲ್ಲ ವೈನ್ ಶಾಪ್ ಮತ್ತು ಬಾರ್‌ಗಳನ್ನು ಮುಚ್ಚಲು ಆದೇಶಿದೆ ಹಾಗೂ ಮತದಾನದ ದಿನ ಮೇ 7 ಮತ್ತು ಮತ ಎಣಿಕೆ ದಿನ ಜೂ. 4 ಈ ಎರಡು ದಿನಗಳನ್ನು ಒಣ ದಿನಗಳೆಂದು ಘೋಷಿಸಿ, ಈ ಅವಧಿಯಲ್ಲಿ ಎಲ್ಲ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ಹಾಗೂ ಅನಧಿಕೃತವಾಗಿ ನಿಗಧಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಮದ್ಯವನ್ನು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.