ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಹೆಗ್ಗಡಿಹಳ್ಳಿ, ಮೇಳೇಕೋಟೆ, ಮೇಲಿನಜೂಗಾನಹಳ್ಳಿ(ಎಸ್.ಎಸ್ ಘಾಟಿ) ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು ₹2.17 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಶನಿವಾರ ಚಾಲನೆ ನೀಡಿದರು.
ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹161.98 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಸಿ.ಸಿ ರಸ್ತೆ, ಚರಂಡಿ, ಅಂಗನವಾಡಿ ದುರಸ್ತಿ, ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.ಮೆಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ₹21 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ಎನ್.ಆರ್.ಎಲ್.ಎಂ ಭವನದಲ್ಲಿ ವಿಶೇಷ ಚೇತನರ ಉಪಯೋಗಕ್ಕಾಗಿ ರ್ಯಾಂಪ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮೇಲಿನಜೂಗಾನಹಳ್ಳಿ(ಎಸ್.ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹34.99 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರು ಘಟಕ ಯಂತ್ರೋಪಕರಣ ಅಳವಡಿಕೆಗೆ ಚಾಲನೆ ನೀಡಿದರು.ಘಾಟಿ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ:
ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವತಿಯಿಂದ ಎಸ್.ಎಸ್ ಘಾಟಿ ಕ್ಷೇತ್ರದಲ್ಲಿ ಈ ವರ್ಷ ನಡೆದ ರಾಸುಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳ ವಿಜೇತ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಬಹುಮಾನ ವಿತರಿಸಿ ಸನ್ಮಾನಿಸಿದರು.ಬಳಿಕ ಮಾತನಾಡಿದ ಸಚಿವರು, ಒಕ್ಕಲು ಮಕ್ಕಳಾದ ನಾವು ಪಶು ಸಂಪತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಘಾಟಿ ಅಭಿವೃದ್ಧಿ ಪ್ರಾಧಿಕಾರ ಉತ್ತಮ ಕೆಲಸ ಮಾಡುತಿದ್ದು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲು ಬದ್ದನಾಗಿದ್ದು, ತಮ್ಮ ತಾತ ತಂದೆಯ ಕಾಲದಲ್ಲಿ ಜಾತ್ರೆಗೆ ಭಾಗವಹಿಸುತಿದ್ದುದನ್ನು ಸ್ಮರಿಸಿದರು.
ಹಾಲು ಹಲ್ಲಿನ ಹೋರಿಗಳಲ್ಲಿ ಪ್ರಥಮ ಬಹುಮಾನವಾಗಿ ಹೊಸಕೋಟೆ ತಾಲೂಕಿನ ತರಬರಹಳ್ಳಿಯ ನಾರಾಯಣಸ್ವಾಮಿ, ಬಾಯಿ ಗೂಡಿದ ಜೋಡಿ ಎತ್ತುಗಳಲ್ಲಿ ಪ್ರಥಮ ಬಹುಮಾನವಾಗಿ ದೇವನಹಳ್ಳಿ ತಾಲೂಕು ಚೆನ್ನಹಳ್ಳಿ ಗ್ರಾಮದ ಮುನಿಯಪ್ಪ, ಹಾಲು ಹಲ್ಲಿನ ಜೊತೆ ಎತ್ತುಗಳಲ್ಲಿ ಪ್ರಥಮ ಬಹುಮಾನವಾಗಿ ಬೆಂಗಳೂರು ನಗರ ಜಿಲ್ಲೆಯ ಜಕ್ಕೂರಿನ ಜಶ್ವಂತ್, ಆರು ಹಲ್ಲಿನ ಜೊತೆ ಎತ್ತುಗಳಲ್ಲಿ ಪ್ರಥಮ ಬಹುಮಾನವಾಗಿ ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಆದರ್ಶ್, ನಾಲ್ಕು ಹಲ್ಲಿನ ಜೋಡಿ ಎತ್ತುಗಳಲ್ಲಿ ದೇವನಹಳ್ಳಿ ತಾಲೂಕಿನ ವಿಜಯಪುರ ಮಾನೆ ನಾರಾಯಣಪ್ಪ, ಆರು ಹಲ್ಲಿನ ಹೋರಿಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಗೆದ್ದಲಪಾಳ್ಯದ ಚಿಕ್ಕ ಮುನಿಯಪ್ಪ, ಎರಡು ಹಲ್ಲಿನ ಜೊತೆ ಎತ್ತುಗಳಲ್ಲಿ ದೇವನಹಳ್ಳಿ ಶ್ರೀನಿವಾಸ್ ಪ್ರಥಮ ಬಹುಮಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ಧಾರ್ಮಿಕ ದತ್ತಿ ಸಹಾಯಕ ನಿರ್ದೇಶಕ ದಿನೇಶ್, ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಣ್ಣ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಜಗದೀಶ್, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.
1ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯ ವಿಜೇತ ರಾಸುಗಳ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಬಹುಮಾನ ವಿತರಿಸಿದರು.
--1ಕೆಡಿಬಿಪಿ3-
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಸಚಿವ ಕೆ.ಎಚ್.ಮುನಿಯಪ್ಪ ಗುದ್ದಲಿಪೂಜೆ ನೆರವೇರಿಸಿದರು.