ಆರೋಗ್ಯ ನಿಧಿ ಯೋಜನೆಯಡಿ ಉಮ್ಮಚಗಿ ಸಹಕಾರಿ ಸಂಘದ ಸದಸ್ಯರಿಗೆ ನೆರವು

| Published : Sep 24 2024, 01:51 AM IST

ಆರೋಗ್ಯ ನಿಧಿ ಯೋಜನೆಯಡಿ ಉಮ್ಮಚಗಿ ಸಹಕಾರಿ ಸಂಘದ ಸದಸ್ಯರಿಗೆ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ತಾಲೂಕಿನ ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಾರ್ಯಾಲಯದಲ್ಲಿ ಸಂಘದ ೧೦೪ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಾರ್ಯಾಲಯದಲ್ಲಿ ಸಂಘದ ೧೦೪ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ, ಪ್ರಸಕ್ತ ಸಾಲಿನಲ್ಲಿ ಸಂಘದ ಆರೋಗ್ಯ ನಿಧಿ ಯೋಜನೆಯಿಂದ ಒಳರೋಗಿಗಳಾಗಿ ದಾಖಲಾಗಿ, ಸೂಕ್ತ ದಾಖಲೆ ನೀಡಿದ ೧೧ ಸದಸ್ಯರಿಗೆ ನಿಯಮಾನುಸಾರ ₹೧,೩೦,೫೪೪ ನೆರವು ನೀಡಲಾಗಿದೆ. ಮಹಸೂಲು ವಿಕ್ರಿ ಮಾಡಿದ ಸದಸ್ಯರ ನೆರವಿಗಾಗಿ ಸ್ಥಾಪಿಸಲಾದ ಆರೋಗ್ಯ ನಿಧಿ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಒಂದು ಕೋಟಿ ರು. ನೀಡುವ ಗುರಿ ಹೊಂದಿದ್ದೇವೆ ಎಂದರು.

ಆನಂತರ ನಡೆದ ಚರ್ಚೆಯಲ್ಲಿ ಆರ್.ಜಿ. ಹೆಗಡೆ ಭಟ್ರಕೇರಿ, ಎನ್.ಜಿ. ಹೆಗಡೆ ಭಟ್ರಕೇರಿ, ಇತರ ಸದಸ್ಯರು ಪಾಲ್ಗೊಂಡು, ಸಲಹೆ-ಸೂಚನೆ ನೀಡಿದರು. ಉಪಾಧ್ಯಕ್ಷ ಎಂ.ಪಿ. ಹೆಗಡೆ ಚವತ್ತಿ, ಆಡಳಿತ ಮಂಡಳಿ ನಿರ್ದೇಶಕರಾದ ನಾಗಪತಿ ಹೆಗಡೆ ಶೀಗೇಮನೆ, ಉದಯ ಭಟ್ಟ ತೋಟದಕಲ್ಲಳ್ಳಿ, ಕೆ.ಆರ್. ಕೃಷ್ಣಮೂರ್ತಿ ಕಾನಗೋಡು, ಅನಂತ ಹೆಗಡೆ ಭಟ್ರಕೇರಿ, ಸೀತಾರಾಮ ನಾಯ್ಕ ಕಣ್ಣೂರು, ನಾರಾಯಣ ಸಿದ್ದಿ ತೋಟಕಟ್ಟು, ವಾಸು ಭೋವಿ ತುಡಗುಣಿ, ಕೈತಾನ್ ಡಿಸೋಜಾ ತುಡಗುಳಿ, ನಯನಾ ಹೆಗಡೆ ಉಮ್ಮಚಗಿ, ಸರಸ್ವತಿ ಪಟಗಾರ ತೋಟಕಟ್ಟು, ಮುಖ್ಯ ಕಾರ್ಯನಿರ್ವಾಹಕ ಆರ್.ಎಸ್. ಹೆಗಡೆ, ಸಹಾಯಕ ಮುಖ್ಯ ಕಾರ್ಯನಿರ್ವಾಹಕ ನಾಗೇಂದ್ರ ಗೌಡ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ: ಉಮ್ಮಚಗಿ, ಕುಂದರಗಿ, ಹಿತ್ಲಳ್ಳಿ ಸೇರಿದಂತೆ ವಿವಿಧ ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ೨೭ ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ಶಿರಸಿಯ ಜಿ.ಜಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಪುಷ್ಕರ ಕಾಗಾರಕೊಡ್ಲು, ಆದರ್ಶ ನಾಯ್ಕ, ದರ್ಶನ ನಾಯ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.