ದೇಸಿ ತಳಿಗಳ ಸಂರಕ್ಷಣೆಗೆ ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಮನವಿ

| Published : May 22 2025, 11:49 PM IST

ದೇಸಿ ತಳಿಗಳ ಸಂರಕ್ಷಣೆಗೆ ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಅಧಿಸೂಚಿತ ಪ್ರಬೇಧಗಳಿಗಿಂತ ಹೆಚ್ಚು ಪೋಷಕಾಂಶಗಳು ಸಮೃದ್ಧವಾಗಿರುವ ದೇಸಿ ತಳಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ದೇಸಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ತಮ್ಮ ಸ್ವ-ವಿವರದೊಂದಿಗೆ ತಮ್ಮ ವ್ಯಾಪ್ತಿಯ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಿ.

ಕನ್ನಡಪ್ರಭವಾರ್ತೆ ನಾಗಮಂಗಲ

ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಅಧಿಸೂಚಿತ ಪ್ರಬೇಧಗಳಿಗಿಂತ ಹೆಚ್ಚು ಪೋಷಕಾಂಶಗಳು ಸಮೃದ್ಧವಾಗಿರುವ ದೇಸಿ ತಳಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ದೇಸಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ತಮ್ಮ ಸ್ವ-ವಿವರದೊಂದಿಗೆ ತಮ್ಮ ವ್ಯಾಪ್ತಿಯ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮೇ 28ರೊಳಗೆ ನೋಂದಾಯಿಸಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ತಿಳಿಸಿದ್ದಾರೆ.ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಿಸುವ ಜೊತೆಗೆ ಆಯಾ ಸ್ಥಳೀಯ ಪ್ರದೇಶಕ್ಕೆ ಅನುಗುಣವಾಗಿ ಸೂಕ್ತ ತಳಿಗಳನ್ನು ಗುರುತಿಸಿ ಸಂರಕ್ಷಣೆ ಮಾಡುವುದು. ಗುರುತಿಸಿದ ದೇಸಿ ತಳಿಗಳನ್ನು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುವುದು. ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು ಮತ್ತು ದೇಸಿ ತಳಿಗಳ ಜನಪ್ರಿಯತೆಗೆ ಬೆಂಬಲ ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಆಯ್ಕೆಯಾದ ಬೆಳೆಗಳು:

ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು ಹಾಗೂ ಸಲಹಾ ಸಮಿತಿ ಶಿಫಾರಸ್ಸು ಮಾಡುವ ಇತರೆ ಬೆಳೆಗಳು ಕಾರ್ಯಕ್ರಮದಡಿ ಆಯ್ಕೆಯಾಗಿವೆ.

ಪರಿಗಣಿಸುವ ಗುಣಲಕ್ಷಣಗಳು:

ತಲೆಮಾರುಗಳಿಂದ ರೈತರು ಬೆಳೆದ ಸಾಂಪ್ರದಾಯಿಕ ಪ್ರಬೇಧಗಳು ಸ್ಥಳೀಯ ಕೃಷಿ ಪದ್ಧತಿ ಮತ್ತು ಪ್ರದೇಶಕ್ಕೆ ಹೊಂದಿಕೊಂಡು ವಿಶಿಷ್ಟವಾದ ಗುಣಲಕ್ಷಣ ಹೊಂದಿರಬೇಕು. ಪಿಪಿವಿಎಫ್‌ಆರ್‌ಎ ಅಡಿಯಲ್ಲಿ ನೋಂದಾಯಿಸಿರಬಹುದು. ಆದರೆ, ಅಧಿಸೂಚಿತ ತಳಿಯಾಗಿರಬಾರದು.

ಜಿಲ್ಲೆಯಲ್ಲಿ ದೇಸಿ ತಳಿಗಳ ಸಂರಕ್ಷಣೆ ಮಾಡುತ್ತಿರುವ ರೈತರನ್ನು ಇಲಾಖೆ ವತಿಯಿಂದ ಗುರುತಿಸಿ ಮೂಲ ಸಮೀಕ್ಷೆಯನ್ನು ಕಿಸಾನ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ದಾಖಲಿಸಲಾಗುತ್ತಿದೆ. ಅರ್ಹ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಪತ್ರ ನೀಡಬೇಕು. ಬೀಜ ಬ್ಯಾಂಕ್‌ನಲ್ಲಿರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ದರಿರಬೇಕು. ಸದರಿ ಯೋಜನೆಯಡಿ ದೇಸಿ ತಳಿಗಳ ಉತ್ಪಾದನೆ ಮತ್ತು ಪ್ರಮಾಣೀಕರಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.