ಸಾರಾಂಶ
ನಮ್ಮ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣದ ಜೊತೆಗೆ ಮಕ್ಕಳಿಗೆ ರಂಗಭೂಮಿ ಶಿಕ್ಷಣವೂ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ತಿಳಿಸಿದರು.ನಗರದ ಹಾರ್ಡ್ವಿಕ್ ಶಾಲೆ ಆವರಣದಲ್ಲಿ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ರಂಗಭೂಮಿ ರಾಷ್ಟ್ರೀಯ ಕಾರ್ಯಾಗಾರ ಸಮಾರೋಪದಲ್ಲಿ ಅವರು ಮಾತನಾಡಿದರು.ನಮ್ಮ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿಸಲಾಗುತ್ತದೆ. ಅದೇ ರೀತಿ ವಿವಿಧ ರೀತಿಯ ಶಿಕ್ಷಣ ನೀತಿ ಕೂಡ ಇದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ರಂಗಭೂಮಿ ಶಿಕ್ಷಣವನ್ನು ನೀಡುವ ಅಗತ್ಯವೂ ಇದೆ ಎಂದರು.ಪ್ರಸ್ತುತ ಮೈಕ್ರೋ ಫ್ಯಾಮಿಲಿ ಹೆಚ್ಚಾಗಿದೆ. ಹೀಗಾಗಿ, ಮಕ್ಕಳು ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಎಲ್ಲಿ ಮಾತನಾಡಬೇಕು, ಎಲ್ಲಿ ಮೌನವಾಗಿರಬೇಕು ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ, ರಂಗಭೂಮಿಯು ಪ್ರತಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಎಲ್ಲಿ ಮಾತನಾಡಬೇಕು, ಎಲ್ಲಿ ಮೌನವಾಗಿರಬೇಕು, ಯಾವುದಕ್ಕಾಗಿ ಹೋರಾಟ ನಡೆಸಬೇಕು ಎಂಬ ಸೂಕ್ಷ್ಮತೆಗಳನ್ನು ರಂಗಭೂಮಿ ಕಲಿಸುತ್ತದೆ ಎಂದು ಅವರು ಹೇಳಿದರು.ಎಷ್ಟೋ ಜನಕ್ಕೆ 60 ವರ್ಷಗಳಾದರೂ ತಮ್ಮ ಬಗ್ಗೆಯೇ ತಮಗೆ ಗೊತ್ತಿರುವುದಿಲ್ಲ. ನಾನೇನು ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಪ್ರಸ್ತುತ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ತಮ್ಮ ಬಗ್ಗೆ ತಮಗೆ ಗೊತ್ತಿಲ್ಲದೆ ಇರುವುದು ಕಾರಣವಾಗಿದೆ. ನಾನೇನು ಎಂಬುದನ್ನು ತಿಳಿದುಕೊಳ್ಳಲು ಬೇರೆಯವರೊಂದಿಗೆ ಮಾತನಾಡುವ ಬದಲು, ತನ್ನೊಂದಿಗೆ ತಾನು ಮಾತನಾಡುವುದನ್ನು ಕಲಿಯಬೇಕು. ಇದಕ್ಕೆ ಆಂತರಿಕ ಸಾಮರ್ಥ್ಯ ಅಗತ್ಯ. ಇದನ್ನು ರಂಗಭೂಮಿ ನೀಡುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣ ರಂಗಭೂಮಿ ಅಗತ್ಯ ಎಂದು ಅವರು ಪ್ರತಿಪಾದಿಸಿದರು.ಇದೇ ವೇಳೆ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಿರಿಯ ರಂಗಕರ್ಮಿ ಪ್ರಸನ್ನ, ರಂಗಭೂಮಿ ನಿರ್ದೇಶಕ ರಜನೀಶ್ ಬಿಸ್ತ್ ಇದ್ದರು.