ಸಾರಾಂಶ
ದೇಶವು ಕಳೆದ 24 ವರ್ಷಗಳಲ್ಲಿ 23 ಲಕ್ಷ ಹೆಕ್ಟೇರ್ ನಷ್ಟುಅರಣ್ಯವನ್ನು ಕಳೆದುಕೊಂಡಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮಾನವನ ಸ್ವಾರ್ಥದಿಂದ ಅಭಿವೃದ್ಧಿಯ ಕಾರಣದಿಂದ ಭೂಮಿ ಹಾಳಾಗುತ್ತಿದೆ, ಹದಗೆಟ್ಟ ಪರಿಸರದಲ್ಲಿ ಮಾನವನ ಉಳಿವು ಅಪಾಯದಲ್ಲಿದೆ ಎಂದು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಟಿ. ಶ್ರೀನಿವಾಸ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನೇಚರ್ ಕ್ಲಬ್, ಐಕ್ಯೂಎಸಿ ಎನ್ಎಸ್ಎಸ್ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ದೇಶವು ಕಳೆದ 24 ವರ್ಷಗಳಲ್ಲಿ 23 ಲಕ್ಷ ಹೆಕ್ಟೇರ್ ನಷ್ಟುಅರಣ್ಯವನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ. 33ರಷ್ಟು ಅರಣ್ಯವಿರಬೇಕು. ಆದರೆ ಅದು ಈಗ ಶೇ.22ಕ್ಕೆ ಇಳಿದಿದೆ. ದೆಹಲಿ, ಹರಿಯಾಣದಂತಹ ರಾಜ್ಯಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಮಾನವನ ಬದುಕುದುಸ್ತರವಾಗಿದೆ. ಭಾರತದಲ್ಲಿ ಪ್ರತಿನಿತ್ಯ 30,000 ಟನ್ ಘನತ್ಯಾಜ್ಯ ವಿಲೇವಾರಿಯಾಗದೆ ಭೂ ಮತ್ತು ಜಲಮೂಲಗಳು ಕಲುಷಿತವಾಗುತ್ತಿವೆ ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ಹಿಂದೆಲ್ಲಾ ಎತ್ತ ನೋಡಿದಡತ್ತ ಎಲ್ಲೆಲ್ಲೂ ಹಸಿರಿತ್ತು, ಆದರೀಗ ಮಾನವನ ಅತಿಯಾದ ದುರಾಸೆಯಿಂದಾಗಿ ಹಸಿರು ಕಾಡಿನ ಬದಲು ಕಾಂಕ್ರೀಟ್ ಕಾಡು ನಿರ್ಮಾಣವಾಗಿದೆ. 15ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನಿಗದಿತ ಮಾನದಂಡಕ್ಕಿಂತ ಹೆಚ್ಚು ಅಂತರ್ಜಲವನ್ನು ಬಳಸಿಕೊಂಡುದರ ಪರಿಣಾಮ ನೀರಿನ ಕೊರತೆಯುಂಟಾಗಿದೆ ಎಂದರು.
ಕಾಲೇಜಿನ ಆವರಣದಲ್ಲಿ ಗಿಡನೆಡುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಅಧ್ಯಾಪಕ, ಅಧ್ಯಾಪಕೇತರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಧ್ಯಾಪಕ ಸಲಹೆಗಾರರಾದ ಡಿ. ಪಲ್ಲವಿ ಸ್ವಾಗತಿಸಿ, ನಿರೂಪಿಸಿದರು.