ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ನೀರು ನಿರ್ವಹಣೆ ಜೊತೆಯಲ್ಲಿ ರಾಸಾಯನಿಕ ಗೊಬ್ಬರ ಮುಕ್ತ ಜಮೀನನ್ನು ಹೊಂದಬೇಕು. ಇಸ್ರೇಲ್ ಮಾದರಿ ನೀರು ನಿರ್ವಹಣಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ಮಂಡ್ಯ: ನೀರು ಬಳಕೆದಾರರ ಸಹಕಾರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿವೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಕೆಆರ್ ಎಸ್ ಮತ್ತು ಹೇಮಾವತಿ ಜಲಾಶಯಗಳ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ ನಡೆದ ನೀರು ಬಳಕೆದಾರರ ಪುನಶ್ಚೇತನ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಸಹಭಾಗಿತ್ವದ ಅವಶ್ಯಕತೆ ಇದೆ. ಇದನ್ನೇ ಮನಗಂಡು ಸರ್ಕಾರ ಸಂಘಗಳನ್ನು ರಚನೆ ಮಾಡಿ ಕೆಲವು ನಿಯಮಗಳನ್ನು ರೂಪಿಸಿದೆ ಎಂದರು.

ಸಂಘಗಳ ಚುನಾಯಿತ ಪ್ರತಿನಿಧಿಗಳು ಅರ್ಥೈಸಿಕೊಂಡು ನೀರು ನಿರ್ವಹಣೆ ಜವಾಬ್ದಾರಿ ಜೊತೆಗೆ ಪರಿಣಾಮಕಾರಿಯಾಗಿ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆಯನ್ನು ಹೊಂದುವುದು ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಕೆ.ಆರ್.ಎಸ್. ಜಲಾಶಯ ಸಲಹಾ ಸಮಿತಿ ಸದಸ್ಯ ನಂಜೇಗೌಡ ಮಾತನಾಡಿ, ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ನೀರು ನಿರ್ವಹಣೆ ಜೊತೆಯಲ್ಲಿ ರಾಸಾಯನಿಕ ಗೊಬ್ಬರ ಮುಕ್ತ ಜಮೀನನ್ನು ಹೊಂದಬೇಕು. ಇಸ್ರೇಲ್ ಮಾದರಿ ನೀರು ನಿರ್ವಹಣಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಹೇಮಾವತಿ ನೀರು ಬಳಕೆದಾರರ ಸಹಕಾರ ಮಹಾ ಮಂಡಲದ ಅಧ್ಯಕ್ಷ ಆರ್.ಎ.ನಾಗಣ್ಣ, ಮನ್ಮುಲ್ ಮಾಜಿ ಅಧ್ಯಕ್ಷ ಎಲ್.ಸಿ. ಮಂಜುನಾಥ್, ಸಂಘಗಳ ಬಲವರ್ಧನೆ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ಹಳುವಾಡಿ ಕೃಷ್ಣ ಮಾತನಾಡಿದರು. ಸಿಇಒ ಸುರೇಶ್ ಉಪಸ್ಥಿತರಿದ್ದರು.

-----------