ಹುಬ್ಬಳ್ಳಿ:
ಉತ್ತರ ಕರ್ನಾಟಕದ ಜನತೆಗೆ ಅನುಕೂಲವಾಗುವಂತೆ ಹುಬ್ಬಳ್ಳಿ-ವಾರಣಾಸಿ ರೈಲು ಸೇವೆಯನ್ನು ವಾರದಲ್ಲಿ 3 ದಿನಗಳಿಗೆ ವಿಸ್ತರಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಭರವಸೆ ನೀಡಿದ್ದಾರೆ.ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ, ಉತ್ತರ ಕರ್ನಾಟಕ ಹಾಗೂ ಕಾಶಿ ನಡುವಿನ ರೈಲು ಸಂಪರ್ಕ ಬಲಪಡಿಸುವಂತೆ ಮನವಿ ಸಲ್ಲಿಸಿದರು. ಪ್ರಸ್ತುತ ಹುಬ್ಬಳ್ಳಿ-ವಾರಣಾಸಿ ರೈಲು ವಾರದಲ್ಲಿ ಒಂದು ದಿನ ಸಂಚರಿಸುತ್ತಿದ್ದು, ಇದನ್ನು 3 ದಿನಗಳಿಗೆ ವಿಸ್ತರಿಸುವಂತೆ ಕೋರಿದರು.
ಕಾಶಿ ಹಾಗೂ ವಾರಣಾಸಿಗೆ ಧಾರ್ಮಿಕ ಯಾತ್ರೆ ಕೈಗೊಳ್ಳುವ ಉತ್ತರ ಕರ್ನಾಟಕದ ಭಕ್ತರು, ಪ್ರವಾಸಿಗರು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರಿಗೆ ರೈಲು ಸೇವೆ ವಿಸ್ತರಣೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಜೋಶಿ ತಿಳಿಸಿದರು.ಹುಬ್ಬಳ್ಳಿ ನಿಲ್ದಾಣ ಹೈಟೆಕ್‌ಗೆ ಮನವಿ:
ಹುಬ್ಬಳ್ಳಿ ರೈಲು ನಿಲ್ದಾಣವನ್ನು ಆಧುನಿಕ ಹಾಗೂ ಹೈಟೆಕ್ ಸೌಲಭ್ಯಗಳೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸುವಂತೆಯೂ ಜೋಶಿ ಮನವಿ ಮಾಡಿದರು. ನಿಲ್ದಾಣದಲ್ಲಿ ಪಾರ್ಕಿಂಗ್, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್ ಹಾಗೂ ವಾಣಿಜ್ಯ ಮಳಿಗೆ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಸಚಿವರಿಂದ ಭರವಸೆ:
ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವಿನಿ ವೈಷ್ಣವ, ಹುಬ್ಬಳ್ಳಿ-ವಾರಣಾಸಿ ರೈಲು (07323/24) ಸೇವೆಯನ್ನು ಶೀಘ್ರದಲ್ಲೇ ವಾರಕ್ಕೆ 3 ದಿನಗಳಿಗೆ ವಿಸ್ತರಿಸುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಉನ್ನತೀಕರಣಕ್ಕೂ ಸಮ್ಮತಿಸಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.