ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಸಣ್ಣ ವ್ಯಾಪಾರಿಗಳ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಲಿದೆ. ಅವರಿಗೆ ಸೂಕ್ತ ಸ್ಥಳ ಗುರುತಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದ ಬಳಿಕವೇ ಫುಟ್‌ಪಾತ್ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಗರದ ಫುಟ್‌ಪಾತ್‌ಗಳು ಸಾರ್ವಜನಿಕರ ಸಂಚಾರಕ್ಕಾಗಿ ಮೀಸಲಾಗಿದ್ದು, ಪಾದಚಾರಿಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಅವುಗಳನ್ನು ಮುಕ್ತಗೊಳಿಸುವುದು ಅನಿವಾರ್ಯವಾಗಿದೆ. ಅನಧಿಕೃತ ಶೆಡ್‌ಗಳು, ಜಾಹೀರಾತು ಫಲಕಗಳು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಇತರೆ ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ಸುರಕ್ಷಿತ ಮತ್ತು ಸುಗಮ ಪಾದಚಾರಿ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದ ಬೀದಿಬದಿ ವ್ಯಾಪಾರಿಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಹತ್ವದ ಭರವಸೆ ನೀಡಿದ್ದು, ಪರ್ಯಾಯ ಸ್ಥಳ ಕಲ್ಪಿಸದೆ ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನಗರದ ಗೃಹ ಕಚೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಸಣ್ಣ ವ್ಯಾಪಾರಿಗಳ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಲಿದೆ. ಅವರಿಗೆ ಸೂಕ್ತ ಸ್ಥಳ ಗುರುತಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದ ಬಳಿಕವೇ ಫುಟ್‌ಪಾತ್ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ನಗರದ ಫುಟ್‌ಪಾತ್‌ಗಳು ಸಾರ್ವಜನಿಕರ ಸಂಚಾರಕ್ಕಾಗಿ ಮೀಸಲಾಗಿದ್ದು, ಪಾದಚಾರಿಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಅವುಗಳನ್ನು ಮುಕ್ತಗೊಳಿಸುವುದು ಅನಿವಾರ್ಯವಾಗಿದೆ. ಅನಧಿಕೃತ ಶೆಡ್‌ಗಳು, ಜಾಹೀರಾತು ಫಲಕಗಳು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಇತರೆ ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ಸುರಕ್ಷಿತ ಮತ್ತು ಸುಗಮ ಪಾದಚಾರಿ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.ಸಂತೆ ಮೈದಾನದಲ್ಲಿ ಈಗಾಗಲೇ ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೀದಿ ವ್ಯಾಪಾರಿಗಳನ್ನು ಹಂತಹಂತವಾಗಿ ಅಲ್ಲಿಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದ್ದು, ನಂತರ ನಗರವನ್ನು ಸುಂದರಗೊಳಿಸುವ ಉದ್ದೇಶದಿಂದ ಫುಟ್‌ಪಾತ್‌ಗಳಿಗೆ ಟೈಲ್ಸ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಸಮಿವುಲ್ಲಾ, ಬಾಣಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಹಾಸನ ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಸೈಯ್ಯದ್ ಸಿಕಂದರ್‌, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಸೇರಿದಂತೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.